ಹಾವೇರಿ ಜಿಲ್ಲೆಯಲ್ಲಿ ಡೆಂಘೀ ದಾಂಗುಡಿ, ಶಂಕಿತ ಜ್ವರಕ್ಕೆ ವಿದ್ಯಾರ್ಥಿ ಬಲಿ?

| Published : May 27 2024, 01:08 AM IST

ಹಾವೇರಿ ಜಿಲ್ಲೆಯಲ್ಲಿ ಡೆಂಘೀ ದಾಂಗುಡಿ, ಶಂಕಿತ ಜ್ವರಕ್ಕೆ ವಿದ್ಯಾರ್ಥಿ ಬಲಿ?
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಡೆಂಘೀ ಜ್ವರ ತೀವ್ರಗತಿಯಲ್ಲಿ ಹರಡುತ್ತಿದ್ದು, ಶಂಕಿತ ಜ್ವರಕ್ಕೆ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಡೆಂಘೀ ಜ್ವರ ದೃಢಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಇರುವುದು ಆತಂಕ ಹೆಚ್ಚಿಸಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಡೆಂಘೀ ಜ್ವರ ತೀವ್ರಗತಿಯಲ್ಲಿ ಹರಡುತ್ತಿದ್ದು, ಶಂಕಿತ ಜ್ವರಕ್ಕೆ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಡೆಂಘೀ ಜ್ವರ ದೃಢಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಇರುವುದು ಆತಂಕ ಹೆಚ್ಚಿಸಿದೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಒಮ್ಮೆಲೆ ಸಾಂಕ್ರಾಮಿಕ ರೋಗಗಳು ಅಪ್ಪಳಿಸಿವೆ. ಅದರಲ್ಲೂ ಮಾರಣಾಂತಿಕ ಡೆಂಘೀ ಪ್ರಕರಣ ದಿನದಿಂದ ದಿನಕ್ಕೆ ಆತಂಕಕಾರಿ ರೀತಿಯಲ್ಲಿ ಏರಿಕೆ ಕಂಡುಬಂದಿದೆ. ಈ ವರ್ಷ 127 ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಶಂಕಿತ ಜ್ವರದಿಂದ ನೂರಾರು ಜನರು ಬಳಲುತ್ತಿದ್ದಾರೆ. ಮೇ 15ರ ವರೆಗೆ 97 ಪ್ರಕರಣ ಇದ್ದದ್ದು, ಮೇ 23ಕ್ಕೆ 127ಕ್ಕೆ ಏರಿದೆ. ಆಸ್ಪತ್ರೆಗಳಲ್ಲಿ ವೈರಲ್‌ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಶನಿವಾರ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾನೆ. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಈತ, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಾಲ್ಕೈದು ದಿನ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಾಗಿದ್ದ. ಆದರೆ, ಅಲ್ಲಿಯೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗಿ ಥ್ರಂಬೋಸೈಟೋಪೆನಿಯಾದಿಂದ ಮೃತಪಟ್ಟಿರುವುದಾಗಿ ಕಿಮ್ಸ್‌ ವೈದ್ಯರು ವರದಿ ನೀಡಿದ್ದಾರೆ, ಡೆಂಘೀ ಪರೀಕ್ಷೆ ವರದಿ ಬರಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಡೆಂಘೀ ಜ್ವರದಿಂದ ಮೃತಪಟ್ಟಿರುವುದಾಗಿ ಗ್ರಾಮಸ್ಥರು ಶಂಕಿಸಿದ್ದು, ಆತಂಕ ಮನೆಮಾಡಿದೆ.

ಮಕ್ಕಳಲ್ಲೇ ಹೆಚ್ಚು: ಜಿಲ್ಲೆಯಲ್ಲಿ ಕಂಡುಬಂದಿರುವ ಡೆಂಘೀ ಪ್ರಕರಣಗಳಲ್ಲಿ 6ರಿಂದ 16 ವರ್ಷದೊಳಗಿನ ಮಕ್ಕಳೇ ಹೆಚ್ಚಿನವರಿದ್ದಾರೆ. 127 ಡೆಂಘೀ ಪ್ರಕರಣಗಳಲ್ಲಿ 6ರಿಂದ 16 ವರ್ಷದೊಳಗಿನ 65 ಮಕ್ಕಳಿದ್ದಾರೆ. 6 ವರ್ಷದೊಳಗಿನ 14 ಮಕ್ಕಳು, 17ರಿಂದ 40 ವರ್ಷದ 37 ಜನರಲ್ಲಿ ಹಾಗೂ 40 ವರ್ಷ ಮೇಲ್ಪಟ್ಟ 11 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಬಿರು ಬೇಸಿಗೆಯ ಸೆಕೆಯಲ್ಲಿ ಹಗಲು ಹೊತ್ತಿನಲ್ಲಿ ಮಕ್ಕಳು ಬಟ್ಟೆ ಧರಿಸದೇ ಆಟವಾಡುವ ವೇಳೆ ಸೊಳ್ಳೆ ಕಡಿಯುವ ಸಾಧ್ಯತೆ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಸಲ ಡೆಂಘೀ ಪ್ರಕರಣದಲ್ಲಿ ಮೂರು ಪಟ್ಟು ಹೆಚ್ಚಳ ಕಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂಗಾರು ಹಂಗಾಮು ಆರಂಭದ ಸಂದರ್ಭದಲ್ಲಿ ಪ್ರತಿ ವರ್ಷ 25-30 ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬರುತ್ತಿದ್ದವು. ಆದರೆ, ಈ ಸಲ ಈ ಸಾಂಕ್ರಾಮಿಕ ಕಾಯಿಲೆ ತೀವ್ರಗತಿಯಲ್ಲಿ ಹಬ್ಬುತ್ತಿರುವುದು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಜಾಗೃತಿ ಚಟುವಟಿಕೆ ನಡೆಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಮಳೆ ನೀರು ನಿಲ್ಲದಂತೆ ಸ್ವಚ್ಛತೆ, ಸೊಳ್ಳೆ ಕಚ್ಚದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದರೂ ಡೆಂಘೀ ನಿಯಂತ್ರಣಕ್ಕೆ ಬಾರದಿರುವುದು ಆತಂಕ ಹೆಚ್ಚಿಸಿದೆ.

ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸೂಚಿಸಲಾಗಿದೆ. ಈ ವಾರವೇ ಶಾಲೆಗಳು ಪುನಾರಂಭ ಆಗುತ್ತಿರುವುದರಿಂದ ಶಾಲಾ ಆವರಣ ಸ್ವಚ್ಛಗೊಳಿಸುವಂತೆ, ಮಳೆ ನೀರು ನಿಲ್ಲದಂತೆ, ಸೊಳ್ಳೆ ಉತ್ಪತ್ತಿ ತಾಣಗಳ ಮೇಲೆ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಂದರು.

ವರ್ದಿ ಗ್ರಾಮದ ವಿದ್ಯಾರ್ಥಿ ಶಂಕಿತ ಡೆಂಘೀ ಜ್ವರದಿಂದ ಮೃತಪಟ್ಟಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಕಿಮ್ಸ್‌ ನೀಡಿರುವ ವರದಿಯಲ್ಲಿ ಬಿಳಿ ರಕ್ತಕಣ ಕಡಿಮೆಯಾಗಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭಾನುವಾರವೇ ತೆರಳಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವವರ ತಪಾಸಣೆ ಮಾಡಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಸಿ.ವಿ. ಹೇಳಿದರು.