ದಟ್ಟ ಮಂಜು, ಕೊರೆಯುವ ಚಳಿಗೆ ಜನತೆ ತತ್ತರ

| Published : Jan 20 2024, 02:05 AM IST

ಸಾರಾಂಶ

ಚಳಿಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಚಳಿ ಅನುಭವ ಜನರಿಗೆ ಆಗಿರಲಿಲ್ಲ. ಆದರೆ ನಾಲ್ಕೈದು ದಿನಗಳಿಂದ ಮಂಜು ಆವರಿಸಿಕೊಳ್ಳುತ್ತಿದ್ದು, ಜನತೆ ಚಳಿಗೆ ತತ್ತರಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಟ್ಟವಾದ ಮಂಜು. ರಾತ್ರಿಯಿಡೀ ಸುರಿದ ಇಬ್ಬನಿಗೆ ತಂಪಾಗಿದ್ದ ವಾತಾವರಣ. ಹೊರಗೆ ತಣ್ಣನೇ ಮೈ ನಡುಗುವ ಚಳಿ. ಮನೆಯ ಹಿಂದೆಯೇ ಆಕಾಶ ಧರೆಗಿಳಿದಂತೆ ಭಾಸವಾದ ಕ್ಷಣ. ಶುಕ್ರವಾರ ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಕಂಡ ಮನಕ್ಕೆ ಮುದ ನೀಡುವ ದೃಶ್ಯಗಳಿವು. ಶುಕ್ರವಾರ ಬೆಳಗ್ಗೆ 9 ಗಂಟೆಯಾದರೂ ದಟ್ಟವಾದ ಮಂಜು ಚಿಕ್ಕಬಳ್ಳಾಪುರ ನಗರ ಮತ್ತು ಹೊರವಲಯಾದ್ಯಂತ ಹರಡಿತ್ತು. ಎದುರಿನವರ ಮುಖ ಕಾಣಿಸದಂತಹ ಮಂಜು, ತಡ ಹೊತ್ತಿನವರೆಗೂ ಇದ್ದಿತ್ತು. ತಡ ಹೊತ್ತಿನವರೆಗೆ ಮಂಜು ಆವರಿಸಿದ್ದರಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕಿದ್ದರು. ಚಳಿಗೆ ಜನ ತತ್ತರ: ಕಳೆದ ಕೆಲ ದಿನಗಳಿಂದಲೂ ನಗರದ ಸುತ್ತಮುತ್ತ ಇದೇ ಈ ರೀತಿ ವಾತಾವರಣವಿದ್ದು, ನಂದಿಗಿರಿ,ಸ್ಕಂದಗಿರಿ, ಗೋರ್ವಧನಗಿರಿ, ಚನ್ನಗಿರಿ, ಜಾಲಾರಿ ನರಸಿಂಹಸ್ವಾಮಿ ಬೆಟ್ಟ ಸಂಪೂರ್ಣವಾಗಿ ಮಂಜಿನಿಂದ ಮುಚ್ಚಿಹೋಗಿ ಜನರಿಗೆ ಮಲೆನಾಡಿನ ಅನುಭವ ನೀಡುತ್ತಿದೆ. ಚಳಿಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಚಳಿ ಅನುಭವ ಜನರಿಗೆ ಆಗಿರಲಿಲ್ಲ. ಆದರೆ ನಾಲ್ಕೈದು ದಿನಗಳಿಂದ ಮಂಜು ಆವರಿಸಿಕೊಳ್ಳುತ್ತಿದ್ದು, ಜನತೆ ಚಳಿಗೆ ತತ್ತರಿಸಿದ್ದಾರೆ.

ಸಂಚಾರಕ್ಕೆ ಅಡಚಣೆ: ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ದಟ್ಟ ಮಂಜಿನಿಂದಾಗಿ ಒಂಬತ್ತು ಗಂಟೆಯಾದರೂ ವಾಹನಗಳ ಹೆಡ್‌ಲೈಟ್ ಹಾಕಿಕೊಂಡು ಸಂಚರಿಸಬೇಕಾದ ಸ್ಥಿತಿ ಇತ್ತು. ನಿತ್ಯ ಕೆಲಸಕ್ಕೆ ಹೋಗುವ ರೈತರು, ಪರಸ್ಥಳಕ್ಕೆ ಕೆಲಸಕ್ಕೆ ತೆರಳುವವರು ಮತ್ತು ಶಾಲಾ-ಕಾಲೇಜಿಗೆ ಅನಿವಾರ್ಯವಾಗಿ ಚಳಿಯಲ್ಲೇ ಸಾಗುತ್ತಿದ್ದರು. ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸ ಕಾರ್ಯಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್ ನಿಲ್ದಾಣಗಳಲ್ಲಿ, ಟೀ ಶಾಪ್ ಎದುರು, ಹೀಗೆ ಅಲ್ಲಲ್ಲಿ ಗುಂಪಾಗಿ ನಿಂತು ಬೆಂಕಿ ಕಾಯಿಸಿಕೊಳ್ಳುತ್ತಿದ್ದರು.

ಸಿಕೆಬಿ-2 ಚಿಕ್ಕಬಳ್ಳಾಪುರ ನಗರದಲ್ಲಿ ದಟ್ಟ ಮಂಜಿನಿಂದಾಗಿ ಬೆಳಗ್ಗೆ 9 ಗಂಟೆ ಸಮಯದಲ್ಲೂ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಸಂಚರಿಸಿದವು.