ಷರತ್ತು ಮೀರಿದ್ದಕ್ಕೆ ದೇವದಾರಿ ಗಣಿಗೆ ತಡೆ: ಖಂಡ್ರೆ

| Published : Jun 24 2024, 01:35 AM IST / Updated: Jun 24 2024, 04:23 AM IST

Eshwar khandre
ಷರತ್ತು ಮೀರಿದ್ದಕ್ಕೆ ದೇವದಾರಿ ಗಣಿಗೆ ತಡೆ: ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆ ವೇಳೆ ಷರತ್ತುಗಳನ್ನು ಉಲ್ಲಂಘಿಸಿದೆ. ಹೀಗಾಗಿ ಕೆಐಒಸಿಎಲ್‌ಗೆ ಗಣಿಗಾರಿಕೆ ನಡೆಸಲು ಮಂಜೂರು ಮಾಡಲಾಗಿದ್ದ ದೇವದಾರಿ ಅರಣ್ಯ ಪ್ರದೇಶದ ಭೂಮಿ ಹಸ್ತಾಂತರವನ್ನು ತಡೆಹಿಡಿಯಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

 ಬೆಂಗಳೂರು  : ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆ ವೇಳೆ ಷರತ್ತುಗಳನ್ನು ಉಲ್ಲಂಘಿಸಿದೆ. ಹೀಗಾಗಿ ಕೆಐಒಸಿಎಲ್‌ಗೆ ಗಣಿಗಾರಿಕೆ ನಡೆಸಲು ಮಂಜೂರು ಮಾಡಲಾಗಿದ್ದ ದೇವದಾರಿ ಅರಣ್ಯ ಪ್ರದೇಶದ ಭೂಮಿ ಹಸ್ತಾಂತರವನ್ನು ತಡೆಹಿಡಿಯಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ತನ್ಮೂಲಕ ಕೇಂದ್ರ ಸಚಿವರಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಸಹಿ ಹಾಕಿದ್ದ ಕುದುರೆಮುಖ ಗಣಿಗಾರಿಕೆ ಅನುಮತಿ ಪ್ರಸ್ತಾವನೆಗೆ ಹಿನ್ನಡೆ ಉಂಟಾಗಿದೆ.

ಈ ಬಗ್ಗೆ ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಖಂಡ್ರೆ, ಕುದುರೆಮುಖ ಕಬ್ಬಿಣದ ಅದಿರು ಕಂಪನಿಯವರು ಹಿಂದೆ ಗಣಿಗಾರಿಕೆ ನಡೆಸುವ ವೇಳೆ ಅನೇಕ ಷರತ್ತುಗಳನ್ನು ಹಾಗೂ ಇತರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ದಂಡವನ್ನೂ ವಿಧಿಸಲಾಗಿದೆ. ಹೀಗಾಗಿ ಕಂಪನಿ ಷರತ್ತುಗಳನ್ನು ಪೂರೈಸುವವರೆಗೂ ಸಂಸ್ಥೆಗೆ ಗಣಿಗಾರಿಕೆ ನಡೆಸಲು 401 ಎಕರೆ ಭೂಮಿಯನ್ನು ಹಸ್ತಾಂತರಿಸಬಾರದು ಎಂದು ತಡೆಹಿಡಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗಣಿಗಾರಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಅನುಮತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಕೆಐಒಸಿಎಲ್‌ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿರಬಹುದು. ಅಷ್ಟು ಮಾತ್ರ ಅವರ ಪಾತ್ರ ಎಂದು ಈಶ್ವರ್‌ ಖಂಡ್ರೆ ಪರೋಕ್ಷ ತಿರುಗೇಟು ನೀಡಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಭೂಮಿ ನೀಡುವಂತೆ ಕುದುರೆಮುಖ ಕಬ್ಬಿಣ ಅದಿರು ಕಂಪನಿ 2018ರ ಮಾ. 16ರಂದು ಮನವಿ ಸಲ್ಲಿಸಿತ್ತು. 2018ರ ಜು. 27ರಂದು ನೋಡಲ್‌ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. 2020ರ ಫೆ.18 ರಂದು ಅರಣ್ಯ ಇಲಾಖೆ ಈ ವಿಚಾರವಾಗಿ ತನ್ನ ನಿಲುವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.ಈ ವರದಿಯಲ್ಲಿ ವಲಯ ಅರಣ್ಯಾಧಿಕಾರಿ, ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದರೆ ನೈಸರ್ಗಿಕ ಕಾಡು ನಾಶವಾಗುತ್ತದೆ. ಜಲಮೂಲ ಹಾಗೂ ನೀರಿನ ಹರಿವಿಗೆ ಹಾನಿಯಾಗುವುದರಿಂದ ಗಣಿಗಾರಿಕೆಗೆ ಅನುಮೋದನೆ ನೀಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರು 2020ರ ಅ. 9ರಂದು ಅರಣ್ಯಾಧಿಕಾರಿಗಳು ನೀಡಿದ ಅಭಿಪ್ರಾಯವನ್ನು ಬದಿಗೊತ್ತಿ ಮೊದಲ ಹಂತದ ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.

2021ರ ಜೂ.24 ರಂದು ಕೇಂದ್ರ ಸರ್ಕಾರ ಕೆಲ ಷರತ್ತುಗಳೊಂದಿಗೆ ಗಣಿಗಾರಿಕೆಗೆ ಪರವಾನಗಿಗೆ ಅನುಮತಿ ನೀಡಿದೆ. ಅದರ ಆಧಾರದ ಮೇಲೆ ನೈಜ್ಯ ಬೆಲೆ 32 ಕೋಟಿ ರು. ಹಾಗೂ ಪರಿಹಾರ ಕಾಮಗಾರಿಗಳಿಗೆ 147 ಕೋಟಿ ರು. ಸೇರಿ ಸರಿಸುಮಾರು 194 ಕೋಟಿ ರು.ಗಳನ್ನು ಪಾವತಿಸಲಾಗಿದೆ. ಈ ಹಣ ಕೇಂದ್ರ ಸರ್ಕಾರದ ಬಳಿ ಇರಲಿದ್ದು, ರಾಜ್ಯಕ್ಕೆ ಶೇ.90 ರಷ್ಟು ಪಾಲು ದೊರೆಯಲಿದೆ. ಇದರ ಬಳಿಕ 2ನೇ ಹಂತದ ಅನುಮತಿ ದೊರೆಯಲಿದೆ. ಈ ಪ್ರಕ್ರಿಯೆಯಲ್ಲಿ ಹಲವು ಲೋಪಗಳು ಉಂಟಾಗಿರುವುದರಿಂದ ಭೂಮಿ ಹಸ್ತಾಂತರ ತಡೆ ಹಿಡಿಯಲಾಗಿದೆ ಎಂದು ಹೇಳಿದರು.