ಸಾರಾಂಶ
ಆರ್.ತಾರಾನಾಥ್
ಚಿಕ್ಕಮಗಳೂರು : ಮಳೆ ಇಲ್ಲದೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್‌ವೆಲ್ ಅವಲಂಬಿತ ತರಕಾರಿ ಬೆಳೆಯನ್ನು ರೈತರು ಕೈ ಬಿಟ್ಟಿದ್ದಾರೆ. ಹಾಗಾಗಿ ಚಿಕ್ಕಮಗಳೂರು ಮಾರುಕಟ್ಟೆಗೆ ಹೊರ ಜಿಲ್ಲೆ ಮಾತ್ರವಲ್ಲ ನೆರೆ ರಾಜ್ಯಗಳಿಂದ ತರಕಾರಿ ಬರುತ್ತಿದೆ.
ಒಂದೊಂದು ತರಕಾರಿ, ಒಂದೊಂದು ಪ್ರದೇಶದಿಂದ ಮಾರುಕಟ್ಟೆಗೆ ಬರುತ್ತಿದೆ. ಅದ್ದರಿಂದ ತರಕಾರಿ ಬೆಲೆ ಗಗನಕ್ಕೆ ಏರಿದೆ. ಸೊಪ್ಪು ಮಾರಾಟ ಮಾಡಿ ಜೀವನ ನಡೆಸುತ್ತಿದ್ದವರು. ಈ ಉದ್ಯೋಗವನ್ನು ಕೈಬಿಡುವ ಸ್ಥಿತಿ ನಿರ್ಮಾಣಗೊಂಡಿದೆ.
ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕಿನ ಕೆರೆ ಅಚ್ಚುಕಟ್ಟು ಪ್ರದೇಶ ಹಾಗೂ ತಗ್ಗಿನ ಪ್ರದೇಶಗಳಲ್ಲಿ ಬೋರ್ ವೆಲ್ ಕೊರೆಸಿ ತರಕಾರಿ ಬೆಳೆಯುತ್ತಿದ್ದರು. ಆದರೆ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆರೆಗಳಲ್ಲಿನ ನೀರು ಬತ್ತಿ ಹೋಗಿದೆ. ಸದಾ ನೀರಿನ ತೇವಾಂಶ ಇರುತ್ತಿದ್ದ ತಗ್ಗಿನ ಪ್ರದೇಶಗಳಲ್ಲೂ ಕೂಡ ನೀರಿಲ್ಲ. ಹಾಗಾಗಿ ತರಕಾರಿ ಬೆಳೆಯಲು ರೈತರು ಮುಂದಾಗುತ್ತಿಲ್ಲ.
ಸ್ಥಳೀಯವಾಗಿ ಸೊಪ್ಪು ಹಾಗೂ ತರಕಾರಿ ಬೆಳೆಯಲು ಸಾಧ್ಯವಾಗದೆ ಇದ್ದರಿಂದ ವ್ಯಾಪಾರಸ್ಥರು ಬೇರೆ ಕಡೆಗಳಿಂದ ತರಕಾರಿ ತಂದು ಮಾರಾಟ ಮಾಡುತ್ತಿದ್ದಾರೆ. ಮೂಲಂಗಿಯನ್ನು ಬೆಂಗಳೂರಿನಿಂದ ತರಿಸಿಕೊಳ್ಳುತ್ತಿದ್ದರೆ, ಕ್ಯಾರಟ್ ತುಮಕೂರು, ಬಿಟ್ರೋಟ್ ಬೆಳಗಾಂ, ಹಿರೇಕಾಯಿ ಚಿಕ್ಕಬಳ್ಳಾಪುರ, ಮೆಣಸಿನಕಾಯಿ ಅರಕಲಗೂಡು, ಲಿಂಬೆಹಣ್ಣು ಬಿಜಾಪುರ, ನುಗ್ಗೆ ಹಾಗೂ ಬೆಂಡೆಕಾಯಿ ಆಂಧ್ರಪ್ರದೇಶದಿಂದ ತರಿಸಿಕೊಳ್ಳುತ್ತಿದ್ದಾರೆ. ಸುಲಿದ ಕಾಳು ಹಾಗೂ ಕೆಲವು ಸೊಪ್ಪು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
ಬೇರೆ ಕಡೆಯಿಂದ ತರಕಾರಿ ತರಿಸುತ್ತಿರುವುದರಿಂದ ಬೆಲೆ ದುಬಾರಿಯಾಗಿದೆ. ಬಂಡವಾಳ ಹಾಕಿ ವ್ಯಾಪಾರ ನಡೆಸಲು ತುಂಬಾ ತೊಂದರೆಯಾಗುತ್ತಿದೆ ಎಂದು ವರ್ತಕರು ಹೇಳುತ್ತಿದ್ದಾರೆ.
ಮಳೆಯೊಂದೇ ಪರಿಹಾರ
ದುಬಾರಿಯಾಗುತ್ತಿರುವ ತರಕಾರಿ ಬೆಲೆ ನಿಯಂತ್ರಣ ಬರಬೇಕಾದರೆ ಮಳೆ ಬರಲೇಬೇಕಾಗಿದೆ. ತೋಟಗಳಲ್ಲಿ ರೈತರು ತರಕಾರಿಯನ್ನು ಉಪ ಬೆಳೆಯನ್ನಾಗಿ ಅವಲಂಬಿಸಿದ್ದಾರೆ. ತೋಟಕ್ಕೆ ಹಾಯಿಸುವ ನೀರಿನಲ್ಲಿ ತರಕಾರಿ ಬೆಳೆಯಬಹುದು ಎಂಬುದು ರೈತರ ಲೆಕ್ಕಚಾರ, ಹಲವೆಡೆ ಇದೇ ಪದ್ಧತಿ ಅನುಸರಿಸಿಕೊಂಡು ಬಂದಿದ್ದರು. ಈಗ ತೋಟಗಳಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬಯಲುಸೀಮೆ ಕೆಲವೆಡೆ ಅಂತರ್ಜಲ ಮಟ್ಟ 800 ಅಡಿಗೆ ಕುಸಿದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ.ಆದ್ದರಿಂದ ತರಕಾರಿ ಬೆಳೆಯುವ ಆಲೋಚನೆ ಯನ್ನು ಕೈ ಬಿಟ್ಟಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಜನವರಿ ಹಾಗೂ ನಂತರದ ಎರಡು ತಿಂಗಳಲ್ಲಿ ಕೆಲವೆಡೆ ಮಳೆಯಾಗಿತ್ತು. ಆದರೆ, ಈ ಬಾರಿ ಕಳೆದ 2023ಕ್ಕಿಂತಲೂ ಕಡಿಮೆ ಮಳೆ ಬಂದಿದೆ. ತರಕಾರಿ ಬೆಳೆಗಳು ಮಾತ್ರವಲ್ಲ ಜಿಲ್ಲೆಯ ಬಯಲುಸೀಮೆ ಹಾಗೂ ಅರೆ ಮಲೆನಾಡು ಭಾಗದಲ್ಲಿರುವ ಅಡಕೆ ತೋಟಗಳನ್ನು ಮುಂಗಾರು ಮಳೆಯವರೆಗೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ ಉತ್ತಮವಾಗಿ ಮಳೆ ಬಂದಿದ್ದರಿಂದ ಹೊಸದಾಗಿ ಅಡಕೆ ತೋಟ ಕಟ್ಟಿದವರ ಸ್ಥಿತಿ ಶೋಚನೀಯವಾಗಿದೆ.