ಸಾರಾಂಶ
ಒಂದು ಎಕರೆ ಈರುಳ್ಳಿ ಬೆಳೆಯಲು ಸರಾಸರಿ ₹೫೦-೬೦ ಸಾವಿರ ಖರ್ಚು ಬರುತ್ತದೆ. ಈ ವರ್ಷ ನೀರಿನ ಕೊರತೆ, ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಸ್ವಲ್ಪ ಹಿಂದಾಗಿ ನಾಟಿ ಮಾಡಿದ ಈರುಳ್ಳಿ ಇಳುವರಿಯಲ್ಲಿ ಕುಂಠಿತವಾಗಿದೆ.
ವಿ.ಎಂ. ನಾಗಭೂಷಣ
ಸಂಡೂರು: ಮಳೆ ಕೊರತೆಯಿಂದ ಜಲಮೂಲಗಳು ಬರಿದಾಗುತ್ತಿವೆ. ಇದು ಅಂತರ್ಜಲ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ಕೊಳವೆಬಾವಿಗಳ ನೀರಿನ ಕೊರತೆ ತಾಲೂಕಿನ ಈರುಳ್ಳಿ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ತಾಲೂಕಿನ ಸಂಡೂರು, ಭುಜಂಗನಗರ, ಕೃಷ್ಣಾನಗರ, ಲಕ್ಷ್ಮೀಪುರ, ದೌಲತ್‌ಪುರ, ತಾರಾನಗರ, ಸುಶೀಲಾನಗರ, ಅಂಕಮನಾಳ್ ಸೇರಿದಂತೆ ವಿವಿಧೆಡೆ ''''ಬಳ್ಳಾರಿ ರೆಡ್ ಹೆಸರಿನ ಸ್ಥಳೀಯ ತಳಿಯ ಈರುಳ್ಳಿಯನ್ನು ಹಿಂಗಾರಿನ ಬೆಳೆಯಾಗಿ ಬೆಳೆಯಲಾಗುತ್ತಿದೆ. ತಾಲೂಕಿನಲ್ಲಿ ಈ ವರ್ಷ ೧೨೦೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇಲ್ಲಿ ಬೆಳೆಯುವ ಈರುಳ್ಳಿ ಪುಣೆ ಈರುಳ್ಳಿಗಿಂತ ಗಾತ್ರದಲ್ಲಿ ಚಿಕ್ಕದಿದ್ದರೂ ರುಚಿಗೆ ಹೆಸರಾಗಿದೆ.ಸಂಡೂರು ಸುತ್ತಮುತ್ತ ರೈತರು ಸಸಿ ನಾಟಿ ಮಾಡಿ, ಎಕರೆಗೆ ಸರಾಸರಿ ೧೦-೧೨ ಟನ್ ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೀಜ ಉಗ್ಗಿ ಕೃಷಿ ಮಾಡಿದ್ದರೆ, ಎಕರೆಗೆ ೭-೮ ಟನ್ ಬೆಳೆಯುತ್ತಾರೆ. ಈ ವರ್ಷ ಮುಂದಾಗಿ ಈರುಳ್ಳಿ ಸಸಿ ನಾಟಿ ಮಾಡಿದವರು, ಎಕರೆಗೆ ಸರಾಸರಿ ೧೦-೧೨ ಟನ್ ಬೆಳೆದಿದ್ದರೆ, ಸ್ವಲ್ಪ ಹಿಂದೆ ನಾಟಿ ಮಾಡಿದವರು ನೀರಿನ ಕೊರತೆಯಿಂದಾಗಿ ಎಕರೆಗೆ ೬-೮ ಟನ್ ಈರುಳ್ಳಿ ಇಳುವರಿ ಪಡೆಯುತ್ತಿದ್ದಾರೆ.ಒಂದು ಎಕರೆ ಈರುಳ್ಳಿ ಬೆಳೆಯಲು ಸರಾಸರಿ ₹೫೦-೬೦ ಸಾವಿರ ಖರ್ಚು ಬರುತ್ತದೆ. ಈ ವರ್ಷ ನೀರಿನ ಕೊರತೆ, ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಸ್ವಲ್ಪ ಹಿಂದಾಗಿ ನಾಟಿ ಮಾಡಿದ ಈರುಳ್ಳಿ ಇಳುವರಿಯಲ್ಲಿ ಕುಂಠಿತವಾಗಿದೆ. ಬೆಲೆ ಬೇರೆ ಕಡಿಮೆಯಾಗುತ್ತಿದೆ. ಇಳುವರಿ ಹಾಗೂ ದರ ಕುಸಿತ ಈರುಳ್ಳಿ ಬೆಳೆದ ರೈತರನ್ನು ಆತಂಕಕ್ಕೆ ದೂಡಿದೆ ಎಂದು ಈರುಳ್ಳಿ ಬೆಳೆಗಾರರಾದ ಚಂದ್ರಶೇಖರ ಮೇಟಿ, ರಾಘು, ಶಿವು, ಸಿದ್ದರಾಮಪ್ಪ, ವಿ.ಜೆ. ಶ್ರೀಪಾದಸ್ವಾಮಿ, ಬಸವರಾಜ ಮೇಟಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಕೆಲ ದಿನಗಳ ಹಿಂದೆ ಕ್ವಿಂಟಲ್ ಈರುಳ್ಳಿ ₹೧೪೦೦-೧೫೦೦ರಂತೆ ಮಾರಾಟವಾಗುತ್ತಿದ್ದುದು, ಈಗ ₹೧೦೦೦ ದಿಂದ ₹೧೩೦೦ರ ತನಕ ಮಾರಾಟವಾಗುತ್ತಿದೆ. ಒಂದೆಡೆ ಇಳುವರಿ ಕುಂಠಿತವಾಗಿರುವುದು ಮತ್ತೊಂದೆಡೆ ದರ ಕುಸಿತವಾಗುತ್ತಿರುವುದು ಈರುಳ್ಳಿ ಬೆಳೆದ ರೈತರನ್ನು ಆತಂಕ ಪಡುವಂತೆ ಮಾಡಿದೆ. ರೈತರು ತಾವು ಪಡೆದ ಬೆಳೆಗೆ ಯೋಗ್ಯ ಬೆಲೆ ಪಡೆಯುವಂತಾಗಬೇಕು.ಸಂಡೂರು ತಾಲೂಕಿನಲ್ಲಿ ೧೨೦೦ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಯಾಗಿ ಈರುಳ್ಳಿ ಬೆಳೆಯಲಾಗಿದೆ ಎನ್ನುತ್ತಾರೆ ಸಂಡೂರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹನುಮಪ್ಪ ನಾಯಕ್.