ಸಾರಾಂಶ
ಹಾನಗಲ್ಲ: ಯಾವುದೇ ಕಾರಣಕ್ಕೂ ಧರ್ಮ, ಜಾತಿಯ ಹೆಸರು ಹೇಳಿ, ವಿಷಬೀಜ ಬಿತ್ತಿ ಮತ ಕೇಳುವುದಿಲ್ಲ. ಕ್ಷೇತ್ರದ ಜನತೆ ಚುನಾವಣೆಯಲ್ಲಿ ಆಶೀರ್ವದಿಸಿ, ಅವಕಾಶ ನೀಡಿದರೆ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ಇಲ್ಲಿನ ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜನಪರ ಕೆಲಸದಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ ಎನ್ನುವ ಭರವಸೆಯೊಂದಿಗೆ ಮತ ಯಾಚಿಸುತ್ತಿದ್ದೇನೆ. ರಾಜ್ಯದಲ್ಲಿ ಭೀಕರ ಬರ ಬಿದ್ದರೂ ಕೇಂದ್ರ ಸರ್ಕಾರ ಬಿಡಿಗಾಸಿನ ನೆರವೂ ನೀಡಿಲ್ಲ, ಅನುದಾನದ ವಿಚಾರದಲ್ಲಿ ಪದೇ ಪದೇ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ತುಟಿ ಬಿಚ್ಚಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾನಗಲ್ ಉಪ ಚುನಾವಣೆಯ ಗೆಲುವಿನ ಬಳಿಕ ಇಡೀ ರಾಜ್ಯಕ್ಕೆ ಹಾನಗಲ್ ಕಾಂಗ್ರೆಸ್ ಕಾರ್ಯಕರ್ತರ ತಾಕತ್ತು ಗೊತ್ತಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದ್ದೇ ಹಾನಗಲ್ ಜನತೆ ಎಂದು ಹೇಳಿದ ಅವರು, ಶಾಸಕ ಶ್ರೀನಿವಾಸ ಮಾನೆ ಅವರು ಪರಿವರ್ತನಾ ಕಲಿಕಾ ಕೇಂದ್ರ ಆರಂಭಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಂಕ ಸಾಧನೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊರಕಿಸುತ್ತಿದ್ದಾರೆ. ಯುವ ಸಮೂಹಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನದಲ್ಲಿದ್ದಾರೆ. ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಹಾವೇರಿಯಲ್ಲಿ ತಾವೂ ಪರಿವರ್ತನಾ ಕಲಿಕಾ ಕೇಂದ್ರ ಆರಂಭಿಸಿ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ಯುವ ಸಮೂಹದ ಭವಿಷ್ಯ ರೂಪಿಸಲು ಗಮನ ನೀಡುವುದಾಗಿ ಗಡ್ಡದೇವರಮಠ ಭರವಸೆ ನೀಡಿದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಮತ್ತೆ ನಮ್ಮನ್ನು ಗುಲಾಮರನ್ನಾಗಿ ಮಾಡಲು ಬಿಜೆಪಿ ಹೊರಟಿದೆ. ಈ ಚುನಾವಣೆ ಪ್ರಜೆಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ನಾವೆಲ್ಲರೂ ಜೊತೆಗೂಡಿ ಜಾಗೃತಿ ಮೂಡಿಸದಿದ್ದರೆ ಅಪಾಯ ಕಾದಿದೆ. ಬರಗಾಲ, ನಿರುದ್ಯೋಗ, ಬೆಲೆ ಏರಿಕೆ ಇನ್ನಿತರ ಜ್ವಲಂತ ಸಮಸ್ಯೆಗಳ ಬಗೆಗೆ ಗಮನ ನೀಡದ ಕೇಂದ್ರ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ ಕಣ್ಣಿಗೆ ಮಣ್ಣೆರಚುತ್ತಿದೆ. ಪ್ರತಿಯೊಂದು ವಿಷಯಗಳಲ್ಲಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಉದ್ಯಮಿಗಳಿಂದ ₹೬ ಸಾವಿರ ಕೋಟಿಗಿಂತಲೂ ಅಧಿಕ ಹಣ ದೇಣಿಗೆ ಪಡೆದಿದೆ. ಮಾನವೀಯ ಮೌಲ್ಯಗಳು ಜೀವಂತವಾಗಿರಲು, ಬಡವರ ಬದುಕು ಹಸನಾಗಲು, ರೈತರ ಜಮೀನು ಉಳಿಯಲು, ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಕಾಂಗ್ರೆಸ್ ಗೆಲ್ಲಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ನಿತ್ಯ ೨-೩ ಗಂಟೆಗಳ ಕಾಲ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಪಕ್ಷ ಕ್ಷೇತ್ರದಲ್ಲಿ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲು ಶ್ರಮ ಪಡಬೇಕಿದೆ ಎಂದರು.
ಮುಖಂಡ ಯಾಸೀರಖಾನ್ ಪಠಾಣ ಮಾತನಾಡಿ, ಶಿಗ್ಗಾಂವಿ-ಸವಣೂರು ಕ್ಷೇತ್ರದ ಚುನಾವಣೆಯಲ್ಲಿ ಗೆದ್ದ ಬಳಿಕ ಬಸವರಾಜ ಬೊಮ್ಮಾಯಿ ಅವರು ಒಂದೇ ಒಂದು ಕೆಡಿಪಿ ಸಭೆ ನಡೆಸಿಲ್ಲ. ಕ್ಷೇತ್ರದಲ್ಲಿ ಓಡಾಡುತ್ತಿಲ್ಲ. ಗಿಮಿಕ್ ಮಾಡುತ್ತಾ ಸಮಯ ಕಳೆಯುವ ಅವರೊಬ್ಬ ಅವಕಾಶವಾದಿ ರಾಜಕಾರಣಿ. ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬುದ್ಧಿ ಕಲಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಪುಟ್ಟಪ್ಪ ನರೇಗಲ್, ಗೀತಾ ಪೂಜಾರ, ಅನಿತಾ ಶಿವೂರ, ಮಹದೇವಪ್ಪ ಬಾಗಸರ, ಮಾಲತೇಶ ಈಳಿಗೇರ, ಶಿವು ತಳವಾರ, ಶಿವು ಭದ್ರಾವತಿ, ಚಂದ್ರಪ್ಪ ಜಾಲಗಾರ ಇದ್ದರು.