ಸಾರಾಂಶ
ಕಲಬುರಗಿಯಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸುವಂತೆ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧರ್ಮರಾಯ ಸಾಲೋಟಗಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ಕಲಬುರಗಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿಗೆ ಅವಮಾನ ಮಾಡಿರುವ ಕಿಡಿಗೇಡಿಗಳ ಹಿಂದಿರುವ ಕಾಣದ ಕೈಗಳು ಯಾವುವು ಎಂಬುದು ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧರ್ಮರಾಯ ಸಾಲೋಟಗಿ ಆಗ್ರಹಿಸಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಹಾಗೂ ಗೂಂಡಾ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು. ರಾಷ್ಟ್ರ ನಾಯಕರ ಪುತ್ಥಳಿಗೆ ಅವಮಾನ ಮಾಡುವ ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ ಅವರು ಒಂದು ಜಾತಿ, ಧರ್ಮವನ್ನು ಮುಂದಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಸರ್ವ ಜಾತಿ, ಧರ್ಮದಲ್ಲಿನ ಶೋಷಿತ ಜನರ ಒಳತಿಗಾಗಿ, ಅವರ ಅಭ್ಯುದಯಕ್ಕಾಗಿ ಸಂವಿಧಾನ ರಚನೆ ಮಾಡಿದ್ದಾರೆ. ಮೀಸಲಾತಿ ಬೇಡುವಾಗ ಮಾತ್ರ ಅಂಬೇಡ್ಕರ ಅವರ ಸಂವಿಧಾನ, ಅಂಬೇಡ್ಕರ ಅವರ ನೆನಪಾಗುತ್ತದೆ. ರಾಷ್ಟ್ರ ನಾಯಕರು ಯಾರೇ ಆಗಿರಲಿ, ಅಂತವರನ್ನು ದೇಶದ್ರೋಹಿಗಳು ಅವಮಾನ ಮಾಡಿದರೆ ಅವರ ಜಾತಿಯವರೇ ವಿರೋಧ, ಹೋರಾಟ ಮಾಡುವ ಮನೋಭಾವ ಬಸವಣ್ಣನವರು ಹುಟ್ಟಿದ ನಾಡಿನ ಜನರಲ್ಲಿ ಮೂಡಿರುವುದು ಕಳವಳಕಾರಿ ಸಂಗತಿ ಎಂದರು.ಕೂಡಲೇ ಅಂಬೇಡ್ಕರ ಪುತ್ಥಳಿಗೆ ಅವಮಾನ ಮಾಡಿದ ದುರುಳರಿಗೆ ಕಠಿಣ ಕಾನೂನಡಿಯಲ್ಲಿ ಬಂಧಿಸಿದ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಅವರ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳಬೇಕು. ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಸರ್ಕಾರವೇ ಹೊಣೆಯನ್ನಾಗಿ ಮಾಡಬೇಕಾಗುತ್ತದೆ ಎಂದು ಧರ್ಮರಾಯ ಸಾಲೋಟಗಿ, ಸುನೀಲ ಗಾಯಕವಾಡ, ಮಲ್ಲಿಕಾರ್ಜುನ ಅರ್ಜನಾಳ, ಶಟ್ಟೆಪ್ಪ ಶಿವಪೂರ, ವಿಠಲ ಲಚ್ಯಾಣ, ರಾಜು ಶಿರಗೂರ, ಕಿರಣ ತೆಲಗ, ಮಲ್ಲಿಕಾರ್ಜುನ ಗೊರನಾಳ, ಸದಾಶಿವ ಆಲಮೇಲ, ಮಾರುತಿ ಮೈಲಾರಿ,ವಿಕಾಸ ಲೋಣಿ, ಶರಣು ಕಟ್ಟಿಮನಿ ಮೊದಲಾದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.