ಗಡಿಪಾರು ಆದೇಶ ಹಿನ್ನೆಲೆಯಲ್ಲಿ ಇತ್ತೀಚಿಗೆ ನಗರದಲ್ಲಿ ವಶಕ್ಕೆ ಪಡೆದಿದ್ದ 31 ಅಕ್ರಮ ಬಾಂಗ್ಲಾದೇಶದ ವಲಸಿಗರನ್ನು ಸ್ವದೇಶಕ್ಕೆ ಕಳುಹಿಸಲು ಪಶ್ಚಿಮ ಬಂಗಾಳಕ್ಕೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಸೋಮವಾರ ಕರೆದೊಯ್ದಿದ್ದಾರೆ.
ಬೆಂಗಳೂರು : ಗಡಿಪಾರು ಆದೇಶ ಹಿನ್ನೆಲೆಯಲ್ಲಿ ಇತ್ತೀಚಿಗೆ ನಗರದಲ್ಲಿ ವಶಕ್ಕೆ ಪಡೆದಿದ್ದ 31 ಅಕ್ರಮ ಬಾಂಗ್ಲಾದೇಶದ ವಲಸಿಗರನ್ನು ಸ್ವದೇಶಕ್ಕೆ ಕಳುಹಿಸಲು ಪಶ್ಚಿಮ ಬಂಗಾಳಕ್ಕೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪೊಲೀಸರು ಸೋಮವಾರ ಕರೆದೊಯ್ದಿದ್ದಾರೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನ ಪಶ್ಚಿಮ ಬಂಗಾಳದ ಮಲ್ಡಾಗೆ ರೈಲಿನಲ್ಲಿ 20 ಪೊಲೀಸರ ಬಿಗಿ ಭದ್ರತೆಯಲ್ಲಿ ಬಾಂಗ್ಲಾ ಪ್ರಜೆಗಳು ಪ್ರಯಣ ಬೆಳೆಸಿದರು. ಮಲ್ಡಾ ಮೂಲಕ ಬಾಂಗ್ಲಾದೇಶಕ್ಕೆ ಆ ಪ್ರಜೆಗಳನ್ನು ಗಡಿದಾಟಿಸಲಾಗುತ್ತದೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಹೇಳಿದ್ದಾರೆ. ಬಾಂಗ್ಲಾ ಪ್ರಜೆಗಳ ಗಡಿಪಾರಿಗೆ ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೀಪ್ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮಲ್ಡಾದಲ್ಲಿ ಸ್ಥಳೀಯ ಅಧಿಕಾರಿಗಳ ಸಹಕಾರ ಪಡೆದು ಗಡಿಪಾರು ಮಾಡಲಾಗುತ್ತದೆ ಎಂದಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪೊಲೀಸರು ಕಾರ್ಯಾಚರಣೆ
ಇತ್ತೀಚಿಗೆ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ ನಗರದ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 105 ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ನಂತರ ಈ ಸಂಬಂಧ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಓಓ)ಗೆ ಗಡಿಪಾರು ಮಾಡುವಂತೆ ಪೊಲೀಸರು ವರದಿ ಸಲ್ಲಿಸಿದ್ದರು. ಈ ಪೊಲೀಸರ ವರದಿಗೆ ಸಮ್ಮತಿಸಿ ಬಾಂಗ್ಲಾ ಪ್ರಜೆಗಳನ್ನು ಮರಳಿ ಸ್ವದೇಶಕ್ಕೆ ಕಳುಹಿಸಲು ಎಫ್‌ಆರ್‌ಓಓ ಆದೇಶಿಸಿತ್ತು. ಈ ಬೆನ್ನಲ್ಲೇ ಮೊದಲ ಹಂತದಲ್ಲಿ 31 ಪ್ರಜೆಗಳನ್ನು ಗಡಿಪಾರಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದಾಗಿದ್ದಾರೆ.
ಅಕ್ರಮ ಬಾಂಗ್ಲಾ ಪ್ರಜೆಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಅಕ್ರಮ ವಲಸಿಗರು ಎಂದು ಶಂಕೆ ಮೇರೆಗೆ ಅಮಾಯಕರನ್ನು ಗುರಿಯಾಗಿಸಿ ದಾಳಿ ನಡೆಸಿದರೆ ಕಾನೂನು ಕ್ರಮ ಜರುಗಿಸುತ್ತೇವೆ.
