ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಮತದಾರರಿಗೆ ಈಗ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತಾಗಿದೆ. ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿಯಾದಿಯಾಗಿ, ಸಚಿವರು, ಶಾಸಕರು ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ. ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಅಭಿವೃದ್ಧಿ ಸಂಪೂರ್ಣ ಮರೀಚಿಕೆಯಾಗಿದೆ. ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸೋಮವಾರ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನ್ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಜೈಲಿಗೆ ಹಾಕುವ ಕೆಲಸವನ್ನೂ ಕಾಂಗ್ರೆಸ್ ಸರ್ಕಾರಕ್ಕೆ ಮಾಡಲು ಆಗಿಲ್ಲ. ಅಲ್ಪಸಂಖ್ಯಾತರ ಈ ತುಷ್ಟೀಕರಣ ನೀತಿಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ರಕ್ಷಣೆಗಿದೆ ಎಂಬ ಕಾರಣಕ್ಕೆ ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಗಲಭೆ ಮಾಡುವ ದುಸ್ಸಾಹಸ ನಡೆದಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ, ಸಿಎಂ, ಮಂತ್ರಿಮಂಡಲ ಇದೆ ಎನ್ನುವ ಭರವಸೆಯೇ ಜನರಿಂದ ಅಳಿಸಿ ಹೋಗಿದೆ ಎಂದು ವಿಜಯೇಂದ್ರ ಟೀಕಿಸಿದರು.ನರೇಂದ್ರ ಮೋದಿ ಜಾರಿಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ (ಎಸ್‌ಇಪಿ) ತರುತ್ತೇವೆ ಎಂದು ಹೇಳಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳಷ್ಟೇ ಅಲ್ಲ, ಪೋಷಕರು, ಶಿಕ್ಷಕರು ಇದರಿಂದ ಚಿಂತೆಗೆ ಒಳಗಾಗಿದ್ದಾರೆ. ಶಿಕ್ಷಣದ ನೀತಿ ನಿಯಮಗಳ ಕಲ್ಪನೆಯೂ ಇಲ್ಲದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಕ್ಕೂ ಅಧಿಕ ಪ್ರೌಢಶಾಲೆ, 50ಕ್ಕೂ ಅಧಿಕ ಪಾಲಿಟೆಕ್ನಿಕ್, 600ಕ್ಕೂ ಅಧಿಕ ಪ.ಪೂ. ಕಾಲೇಜುಗಳಾಗಿವೆ. 5ನೇ ವೇತನ ಆಯೋಗದ ಶಿಫಾರಸು ಯಥಾವತ್ ಅನುಷ್ಠಾನ, ಅತಿಥಿ ಉಪನ್ಯಾಸಕರ ಗೌರವಧನ 14 ಸಾವಿರ ರು. ಇದ್ದದ್ದನ್ನು 34 ಸಾವಿರ ರು.ಗೆ ಏರಿಕೆ ಮಾಡುವ ತೀರ್ಮಾನ ಆದದ್ದು ಬಿಜೆಪಿ ಸರ್ಕಾರದ ಕಾಲದಲ್ಲಿ ಎಂದರು.ಬಂಡಾಯಕ್ಕೆ ಜನ ಮರಳಾಗಲ್ಲ:
ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅನೇಕರು ಸ್ಪರ್ಧಾ ಅಪೇಕ್ಷೆ ಇಟ್ಟುಕೊಂಡಿದ್ದರು. ಅನೇಕರು ಆಕಾಂಕ್ಷಿಗಳಾಗಿದ್ದರೂ ವರಿಷ್ಠರು ತೀರ್ಮಾನ ಮಾಡಿದ ನಂತರ ಸಂಘಟನೆಯಲ್ಲಿ ಶ್ರದ್ಧೆಯಿಟ್ಟುಕೊಂಡು ಅಭ್ಯರ್ಥಿಗಳ ಗೆಲುವಿಗೆ ಶ್ರಮ ಹಾಕುತ್ತಿರುವುದು ಶ್ಲಾಘನೀಯ ಎಂದ ವಿಜಯೇಂದ್ರ, ಈಗ ಸ್ಪರ್ಧಿಸುತ್ತಿರುವ ಕೆಲವರು ಗೆದ್ದ ಮೇಲೆ ಬಿಜೆಪಿಗೆ ವಾಪಸಾಗ್ತೇವೆ ಎನ್ನುವ ಮಾತು ಹೇಳುತ್ತಿದ್ದಾರೆ. ಅದಕ್ಕೆ ಮತದಾರರು ಮರಳಾಗಲ್ಲ. ಬಿಜೆಪಿ- ಜೆಡಿಎಸ್ ಒಂದಾಗಿ ಸಾಗುತ್ತಿರುವಾಗ ಮೈತ್ರಿ ಅಭ್ಯರ್ಥಿಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವುದು ಎಲ್ಲ ನಾಯಕರು, ಕಾರ್ಯಕರ್ತರ ಗುರಿಯಾಗಲಿ ಎಂದು ಸಲಹೆ ನೀಡಿದರು.ಭೋಜೇಗೌಡರು ನುರಿತ ರಾಜಕಾರಣಿ. ಅವರ ಮಾತು ಕೇಳಿದರೆ ಹಿಂದೆ ಬಿಜೆಪಿ ಸ್ವಯಂಸೇವಕರಾಗಿದ್ದರು ಎನಿಸುತ್ತದೆ. ಡಾ.ಧನಂಜಯ ಸರ್ಜಿ ಹೊಟ್ಟೆಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ, ಅವರು ಮಾಡಿರುವ ಸೇವೆಯ ಕಾರಣಕ್ಕೆ ಜನರೇ ಅವರನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ರಾಜಕಾರಣದಲ್ಲಿ ಪ್ರಾಮಾಣಿಕರು ಬರಬೇಕಿದೆ ಎಂದರು.
ಸಂಘಟನಾ ಶಕ್ತಿಗೆ ಜಯ:ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಸಕರಾದ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಪ್ರತಾಪ್‌ಸಿಂಹ ನಾಯಕ್, ಲೋಕಸಭಾ ಚುನಾವಣೆ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಬಿಜೆಪಿ ಮುಖಂಡರಾದ ಸುಧೀರ್ ಶೆಟ್ಟಿ ಕಣ್ಣೂರು, ಡಿ.ಎಸ್. ಅರುಣ್, ದತ್ತಾತ್ರೇಯ, ಶರಣ್, ತಮ್ಮೇಶ್ ಗೌಡ, ಮಂಜುಳಾ ರಾವ್, ನಿತಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಮತ್ತಿತರರಿದ್ದರು.