ಮುಳಬಾಗಿಲು

ಹಣ ದುರುಪಯೋಗ ಮತ್ತು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ತಾಯಲೂರು ಗ್ರಾಪಂ ಪಿಡಿಓ ಎಂ.ಆರ್.ಶ್ರೀನಿವಾಸ್ ರೆಡ್ಡಿ ಅವರನ್ನು ಜಿಪಂ ಸಿಇಒ ಪ್ರವೀಣ್ ಬಾಗೇವಾಡಿ ಅಮಾನತುಗೊಳಿಸಿದ್ದಾರೆ.

ತಾಯಲೂರು ಸರ್ವೇ ನಂಬರ್ ೧೧೯ರಲ್ಲಿ ಎರಡು ಎಕರೆ ಒಂದು ಗುಂಟೆ ಜಮೀನು, ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆದೇಶ ಪಡೆದುಕೊಂಡ ನಂತರ ಯೋಜನಾ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿ ಇಲ್ಲದೆ ಅಕ್ರಮವಾಗಿ ಬಡಾವಣೆ ನಿರ್ಮಿಸಿ ೪೯ ಇ ಸ್ವತ್ತು ಖಾತೆಗಳನ್ನು ಮಾಡಿರುವುದು ಅವರ ಮೇಲಿನ ಆರೋಪವಾಗಿದೆ.

ಅದೇ ರೀತಿ ತಾಯಲೂರು ಸರ್ವೇ ನಂಬರ್ ೯೯/೭ ರಲ್ಲಿ ೨ ಎಕರೆ ೧ ಗುಂಟೆ ಜಮೀನು, ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಆದೇಶ ಪಡೆದುಕೊಂಡ ನಂತರ ಯೋಜನಾ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿ ಇಲ್ಲದೆ ಅಕ್ರಮವಾಗಿ ೨೬ ಇ ಸ್ವತ್ತು ಖಾತೆಗಳನ್ನು ಮಾಡಿದ್ದಾರೆ.

ಬಸ್ ನಿಲ್ದಾಣ ಮುಖ್ಯ ವೃತ್ತದಲ್ಲಿ ಸರ್ಕಾರಿ ಗ್ರಾಪಂ ಜಾಗದಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಪೆಟ್ಟಿಗೆ ಅಂಗಡಿ ಇಟ್ಟಿದ್ದು ಅದೇ ರೀತಿ ಸಂತೆ ಮೈದಾನದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದು ಇವುಗಳನ್ನು ತೆರವುಗೊಳಿಸದೆ ನಿರ್ಲಕ್ಷ ವಹಿಸಿರುವುದು ಹಾಗೂ ಗ್ರಾಪಂ ವಾರ್ಡ್‌ಗಳಲ್ಲಿ ವಾರ್ಡ್ ಸಭೆ ಮಾಡದೆ ಅಧ್ಯಕ್ಷ ಉಪಾಧ್ಯಕ್ಷರ ಗಮನಕ್ಕೆ ತಿಳಿಸದೆ ಗ್ರಾಮಸಭೆ ಮಾಡಿರುವುದು ಹಾಗೂ ೧೫ನೇ ಹಣಕಾಸಿಗೆ ಸಂಬಂಧಿಸಿದಂತೆ ಹಣ ದುರ್ಬಳಕೆ ಮಾಡಿರುವುದು ಕರ ವಸೂಲಿಗಾರ ವಿ ಶ್ರೀನಿವಾಸ್ ೮೬೯೬೭ ರು. ತೆರಿಗೆ ವಸೂಲಿ ಹಣ ಬ್ಯಾಂಕಿಗೆ ಜಮಾ ಮಾಡದೆ ಹಣ ದುರುಪಯೋಗ ಮಾಡಿಕೊಂಡಿದ್ದು ಆತ ನೊಂದಿಗೆ ಶಾಮಿಲಾಗಿ ಕರ್ತವ್ಯ ಲೋಪ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಜಿಪಂ ಸಿಇಒ ಶ್ರೀನಿವಾಸ್ ರೆಡ್ಡಿರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.