ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿರಾಜ್ಯದ ಅಸ್ಮಿತೆಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನ ನಡೆಯುತ್ತಿರುವುದು ಖಂಡನೀಯ. ಗೋಮುಖ ವ್ಯಾಘ್ರಗಳ ದುರಹಂಕಾರದ ಮಾತುಗಳಿಂದ ಧಾರ್ಮಿಕತೆಗೆ ಧಕ್ಕೆ ಆಗುತ್ತಿದ್ದು, ಕಾನೂನಿಗೂ ಮೋಸ ಉಂಟಾಗುತ್ತಿದೆ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಜಿ. ಹೇಳಿದರು.ಅವರು ಶನಿವಾರ ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿರುವವರ ಮೇಲೆ ದೂರು ನೀಡಲು ಬಂದ ಸಂದರ್ಭ ಮಾತನಾಡಿದರು.ಬುರುಡೆ ಪ್ರಕರಣದಲ್ಲಿ ದೂರುದಾರನಿಗೆ ಕೊಟ್ಟ ಸ್ವಾತಂತ್ರ್ಯ ಹೆಚ್ಚಾಯಿತು. ಆತ ಮಾಡಿರುವುದು ಘೋರ ಅಪರಾಧ. ಇಂಥರಿಗೆ ಗಡಿಪಾರು ಶಿಕ್ಷೆ ವಿಧಿಸಬೇಕು. ಸರ್ಕಾರ ಇಂತಹ ಕೃತ್ಯ ನಡೆಸುವವರನ್ನು ಸೂಕ್ಷ್ಮತೆಯಿಂದ ಮಟ್ಟ ಹಾಕುವ ಅಗತ್ಯವಿದೆ ಎಂದರು.ಎಸ್‌ಐಟಿ ತನಿಖೆ ಆರಂಭದ ಹಂತದಿಂದಲೇ ಎಡವಿದೆ. ಬುರುಡೆ ತಂದಾಗಲೇ ಅದರ ತನಿಖೆ ನಡೆಸಿ ಮುಂದುವರಿಯ ಬೇಕಿತ್ತು. ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸುಮೊಟೋ ಕೇಸ್ ದಾಖಲಿಸಬೇಕು ಎಂದರು.ಸುಮಾರು 220 ಕಾರುಗಳಲ್ಲಿ ಬೆಂಗಳೂರು, ಹಾಸನ, ಮೈಸೂರು, ತುಮಕೂರು, ನೆಲಮಂಗಲ ಭಾಗದಿಂದ ನೂರಾರು ಮಂದಿ ಆಗಮಿಸಿದ್ದರು.
ಪೊಲೀಸರಿಂದ ತಡೆ:ನೂರಾರು ಮಂದಿ ಎಸ್‌ಐಟಿ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ಪೊಲೀಸರು ತಡೆ ಒಡ್ಡಿದರು. ಈ ವೇಳೆ ಪೊಲೀಸರು ಮತ್ತು ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ 4 ಜನರಿಗೆ ದೂರು ನೀಡಲು ತೆರಳುವ ಅವಕಾಶ ನೀಡಲಾಯಿತು.