ಸಾಂಪ್ರದಾಯಿಕ ಮತ್ತು ಹೊಸ ಬಗೆಯ ದೇಸಿ ಅಕ್ಕಿ ಅಡುಗೆಗಳನ್ನು ಪರಿಚಯಿಸಲು ದೇಸಿ ಅಕ್ಕಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಹಿರಿಯರು ನೂರಾರು ವರ್ಷಗಳಿಂದ ಬೆಳೆಸುತ್ತಿದ್ದ ದೇಸಿ ಅಕ್ಕಿ ತಳಿಗಳು ಸ್ಥಳೀಯ ಅನ್ನ ಸಂಸ್ಕೃತಿಯನ್ನು ಪೋಷಿಸಿವೆ. ಪೋಷಕಾಂಶಗಳಿಂದ ಸಮೃದ್ದವಾಗಿದ್ದ ಈ ತಳಿಗಳು ಆರೋಗ್ಯವನ್ನು ಕಾಪಾಡುತ್ತಿದ್ದವು. ಅನ್ನವೇ ಔಷಧವಾಗಿತ್ತು.‌ ಇಂಥ ದೇಸಿ ಅಕ್ಕಿಗಳನ್ನು ಬಳಸುವ ಮೂಲಕ ಗ್ರಾಹಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಕರೆ ನೀಡಿದರು.

ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ, ಸಹಜ ಸೀಡ್ಸ್ ಹಾಗೂ ಭತ್ತ ಉಳಿಸಿ ಆಂದೋಲನದ ಆಶ್ರಯದಲ್ಲಿ ನಡೆದ ದೇಸಿ ಅಕ್ಕಿ ಮೇಳದ ಅಂಗವಾಗಿ ಭಾನುವಾರ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ನಗರದ ಗ್ರಾಹಕರಿಗೆ ಭತ್ತ ಸಂಸ್ಕೃತಿ ಮತ್ತು ವೈವಿಧ್ಯದ ಬಗ್ಗೆ ಅರಿವು ಮೂಡಿಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು.

ಭತ್ತದ ಲೋಕ - ನಾ ಕಂಡಂತೆ ಕುರಿತು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 5 ರಿಂದ 9 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಆರ್. ಕುಶಾಲ್ (ಪ್ರಥಮ), ರಿಷಿಕಾ (ದ್ವಿತೀಯ) ಮತ್ತು ಎಸ್. ಮೌಲ್ಯ (ತೃತೀಯ) ಬಹುಮಾನ ಗಳಿಸಿದರು. 10 ರಿಂದ 12 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ತನೀಷ್ ಕುಮಾರ್ (ಪ್ರಥಮ), ಗೋಕುಲ್ ಆರ್ಯನ್ (ದ್ವಿತೀಯ) ಮತ್ತು ಎಂ.ಎನ್. ಲಾಲಿತ್ಯ (ತೃತೀಯ) ಬಹುಮಾನ ಗಳಿಸಿದರು. ಕಲಾ ಶಿಕ್ಷಕ ಲೋಕೇಶ್ ತೀರ್ಪುಗಾರರಾಗಿದ್ದರು.

ದೇಸಿ ಅಡುಗೆಗಳ ಘಮಲು

ಸಾಂಪ್ರದಾಯಿಕ ಮತ್ತು ಹೊಸ ಬಗೆಯ ದೇಸಿ ಅಕ್ಕಿ ಅಡುಗೆಗಳನ್ನು ಪರಿಚಯಿಸಲು ದೇಸಿ ಅಕ್ಕಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ದೇಸಿ ಅಕ್ಕಿ ಅಡುಗೆ ಸ್ಪರ್ಧೆಗೆ ಮಾಪಿಳ್ಳೆ ಸಾಂಬ ಇಡಿಯಪ್ಪಂ, ಕಚಡಿಸಾಂಬ ಕಿಚಡಿ, ಕಪ್ಪಕ್ಕಿ ಪಾಯಸ, ಕೆಂಪಕ್ಕಿ ಶಾವಿಗೆ, ಕೆಂಪಕ್ಕಿ ಪಾಯಸ, ಅವಲಕ್ಕಿ ಪಾಯಸ, ಪರಿಮಳದಕ್ಕಿ ಪಲಾವ್ ಮೊದಲಾದ ಖಾದ್ಯಗಳು ಬಂದಿದ್ದವು.

ಈ ಸ್ಪರ್ಧೆಯಲ್ಲಿ ಭಾರತಿ (ಪ್ರಥಮ), ನಾಗಮಣಿ ವಿರುಪಾಕ್ಷ (ದ್ವಿತೀಯ) ಬಹುಮಾನ ಗಳಿಸಿದರು. ತೀರ್ಪುಗಾರರಾಗಿ ಕೃಷ್ಣಿ ಶಿರೂರ, ಸೈಯದ್ ಘನಿಖಾನ್ ಮತ್ತು ಪಾಂಡುರಂಗ ಭಟ್ ಉತ್ತಮ ಖಾದ್ಯಗಳನ್ನು ಆಯ್ಕೆ ಮಾಡಿದರು. ವಿಜೇತರಿಗೆ ಭತ್ತ ಕೃಷಿಕ ಕಿರುಗಾವಲಿನ ಸೈಯದ್ ಘನಿಖಾನ್ ಬಹುಮಾನ ವಿತರಿಸಿದರು.

ದೇಸಿ ಅಕ್ಕಿಗಳಿಗೆ ಮನಸೋತ ಗ್ರಾಹಕರು

ಎರಡು ದಿನಗಳ ದೇಸಿ ಅಕ್ಕಿ ಮೇಳ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಹೊಸ ತಲೆಮಾರಿನ ಯುವ ದಂಪತಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದದ್ದು ವಿಶೇಷ. ಅಂಗಡಿಯ ಪಾಲೀಷ್ ಅಕ್ಕಿ ಮಾತ್ರ ನೋಡಿದ್ದ ಬಹುತೇಕರು, ಮೊದಲ ಬಾರಿ ಕೆಂಪು ಮತ್ತು ಕಪ್ಪು ಅಕ್ಕಿಯನ್ನು ನೋಡಿ ಅಚ್ಚರಿಗೊಂಡರು. ಪ್ರದರ್ಶನಕ್ಕೆ ಬಂದಿದ್ದ ಬಣ್ಣ ಬಣ್ಣದ ಅಕ್ಕಿಗಳನ್ನು ನೋಡಿ, ಮುಟ್ಟಿ ಸಂಭ್ರಮಿಸಿದರು.

ರಾಜಮುಡಿ ಅಕ್ಕಿಗೆ ವಿಷೇಶ ಬೇಡಿಕೆ ಇತ್ತು. ಕಾಲಾ ಬಾತ್ ಕಪ್ಪು ಅಕ್ಕಿ ಎಲ್ಲ ಮಳಿಗೆಗಳಲ್ಲಿ ಬೇಗನೇ ಖಾಲಿಯಾಯಿತು. ಗಂಧಸಾಲೆಯ ಪರಿಮಳಕ್ಕೆ ಗ್ರಾಹಕರು ಮನ ಸೋತರು. ದೇಸಿ ಅಕ್ಕಿಗಳನ್ನು ಮಾರಾಟಕ್ಕೆ ತಂದ ದೇಸಿ ಸೀಡ್ ಪ್ರೊಡ್ಯೂಸರ ಕಂಪನಿ ಮತ್ತು ದೇವ ಧಾನ್ಯ ರೈತ ಕಂಪನಿ 25 ಕ್ವಿಂಟಲ್ ದೇಸಿ ಅಕ್ಕಿಗಳನ್ನು ಮಾರಾಟ ಮಾಡಿದರು.

ಮಳೆ ವೈಫಲ್ಯದ ಕಾರಣ, ಕನ್ನಂಬಾಡಿ ಮತ್ತು ಕಬಿನಿ ಜಲಾಶಯಗಳಿಂದ ನೀರು ಬಿಡದಿರುವ ಕಾರಣ ದೇಸಿ ಭತ್ತದ ಬಿತ್ತನೆ ಬೀಜ ಕೊಳ್ಳಲು ರೈತರು ಆಸಕ್ತಿ ತೋರಲಿಲ್ಲ. ಬೆರಳೆಣಿಕೆಯಷ್ಟು ರೈತರು ಮಾತ್ರ ಬಿತ್ತನೆ ಬೀಜಗಳನ್ನು ಕೊಂಡರು.