ಕಾಂಗ್ರೆಸ್ ಸರ್ಕಾರದ ಹತಾಶೆಯ ನಡೆ: ಯಾಳಗಿ

| Published : Dec 22 2024, 01:32 AM IST

ಸಾರಾಂಶ

Desperate move by Congress government: Yalagi

ಕನ್ನಡಪ್ರಭ ವಾರ್ತೆ ಸುರಪುರ

ಸಿ.ಟಿ. ರವಿ ಅವರನ್ನು ಎನ್‌ಕೌಂಟರ್ ಮಾಡಿ ಕೊಲ್ಲಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು. ಬಿಜೆಪಿ ನಾಯಕರು, ಕಾರ್ಯಕರ್ತರ ಪ್ರತಿಭಟನೆಯಿಂದ ಅವರನ್ನು ಕಾಪಾಡಿಕೊಳ್ಳಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಹತಾಶೆಯ ನಡೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಆಕ್ರೋಶ ಹೊರಹಾಕಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿ.ಟಿ.ರವಿ ಅವರನ್ನು ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ವಿನಾಕಾರಣ ಸುತ್ತಿಸಿದ್ದಾರೆ. ರಾಮದುರ್ಗ ಹೊರವಲಯದ ದೊಡ್ಡ ಕಂದಕವೊಂದರಲ್ಲಿ ರಾತ್ರಿ ವಾಹನ ನಿಲ್ಲಿಸಿ ಎನ್‌ಕೌಂಟರ್ ಮಾಡಲು ಯತ್ನಿಸಿದ್ದಾರೆ. ಆದರೆ, ಅವರ ವಾಹನ ಬೆನ್ನಟ್ಟಿದ ಬಿಜೆಪಿಯ ನಾಯಕರು ಅದನ್ನು ತಪ್ಪಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ಪ್ರತಿ ಅರ್ಧ ತಾಸಿಗೂ ಕಾಂಗ್ರೆಸ್‌ನ ಒಬ್ಬ ನಾಯಕ ಪೊಲೀಸರಿಗೆ ಫೋನ್ ಮಾಡಿ ನಿರ್ದೇಶನ ನೀಡಿದ್ದಾನೆ. ಕಾಂಗ್ರೆಸ್‌ನ ಏಜೆಂಟರಂತೆ ಪೊಲೀಸರು ವರ್ತಿಸಿದ್ದಾರೆ. ತಮ್ಮನ್ನು ಕೊಲೆ ಮಾಡುವ ಯತ್ನ ನಡೆಸಲಾಯಿತು ಎಂದು ರವಿ ಅವರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ ಎಂದರು.

ಈ ಹಿಂದೆ ಲಾಲೂ ಪ್ರಸಾದ ಯಾದವ ಅವರ ಬಿಹಾರ ಸರ್ಕಾರದಂತೆ ಇಂದಿನ ಕರ್ನಾಟಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಅಧಿವೇಶನ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಲಾಯಿತು. ತಮ್ಮ ವಿರುದ್ಧ ಮಾತನಾಡುವವರ ಮೇಲೆ ವೈಯಕ್ತಿಕ ದ್ವೇಷ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

------

21ವೈಡಿಆರ್10: ಅಮೀನ್ ರೆಡ್ಡಿ ಪಾಟೀಲ್ ಯಾಳಗಿ, ಬಿಜೆಪಿ ಜಿಲ್ಲಾಧ್ಯಕ್ಷ, ಯಾದಗಿರಿ.