ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ನ್ಯಾಯಾಲಯದ ಆದೇಶವಿದ್ದರೂ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ ತಿರುಮಣಿ ಪೊಲೀಸರು ವಿಫಲರಾಗಿದ್ದಾರೆ ಎಂದು ತಾಲೂಕಿನ ಬಳಸಮುದ್ರ ಗ್ರಾಮದ ಕಾಂತಮ್ಮ ಬುಡ್ಡಣ್ಣ ಕುಟುಂಬಸ್ಥರು ಆರೋಪಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷದ ಹಿಂದೆ ಇದೇ ಬಳಸಮುದ್ರ ಗ್ರಾಮದ ರಾಮಾಂಜಿನಪ್ಪ ಎನ್ನುವರಿಂದ ಎರಡು ಗುಂಟೆ ವಿಸ್ತಿರ್ಣದ ನಿವೇಶನ ಖರೀದಿಸಿದ್ದು ನಿಯಮನುಸಾರ ಕ್ರಯ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಮನೆ ನಿರ್ಮಾಣಕ್ಕೆ ಮುಂದಾದ ವೇಳೆ, ನಿವೇಶನ ಪಕ್ಕದಲ್ಲಿ ವಾಸವಿರುವ ಮಂಜುಳಮ್ಮ ಎನ್ನುವರು ವಿನಾ ಕಾರಣ ತಕಾರರು ತೆಗೆದು ಅಡ್ಡಿಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನಿವೇಶನ ನಮ್ಮ ಪರವಾಗಿ ತೀರ್ಪು ನೀಡಿ ಆದೇಶ ಜಾರಿಪಡಿಸಿದೆ. ಆದೇಶದ ಪತ್ರಿಯನ್ನು ಸ್ಥಳೀಯ ಗ್ರಾಪಂ ಹಾಗೂ ಪೊಲೀಸ್ ಠಾಣೆಗೆ ನೀಡಲಾಗಿದೆ. ಈಗ ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ತೀರ್ಪಿನ ಜಾಗದಲ್ಲಿ ಮಂಜುಳಮ್ಮ ಮೈಲಾರರೆಡ್ಡಿ ಹಾಗೂ ಕುಟುಂಬ ಸದಸ್ಯರು ಬುನಾದಿ ಹಾಕುತ್ತಿದ್ದಾರೆ. ನ್ಯಾಯಾಲಯದ ದಾಖಲೆ ಸಮೇತ ತಿರುಮಣಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಕೆಲಸ ನಿಲ್ಲಿಸಿಲ್ಲ ಎಂದರು. ಈ ದೌರ್ಜನ್ಯದಲ್ಲಿ ರಾಮಲಿಂಗಯ್ಯ, ಮಹದೇವ್ ಕುಮಾರ್, ಮಂಜುಳಮ್ಮ ಬೆಂಬಲಕ್ಕೆ ನಿಂತಿದ್ದು ಗ್ರಾಮದ ಹೈಕೋರ್ಟ್ ವಕೀಲರೊಬ್ಬರು ಜೈಲಿಗೆ ಹಾಕಿಸುತ್ತೇನೆ. ರೌಡಿಗಳನ್ನು ಬಿಟ್ಟು ಬುದ್ದಿ ಕಲಿಸಬೇಕಾಗುತ್ತದೆ. ಎಚ್ಚರಿಕೆಯಿಂದ ಇರಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ರಕ್ಷಣೆ ಕೋರಿ ಅಗತ್ಯ ದಾಖಲೆಯೊಂದಿಗೆ ದೂರು ಸಲ್ಲಿಸಿದ್ದರೂ ತಿರುಮಣಿ ಪೊಲೀಸರು ವಿರೋಧಿಗಳ ಜೊತೆಗೆ ಶಾಮೀಲಾಗಿ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದರು.