ಕೊಟ್ಟೂರು: ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ರೈತರು ಭೂಮಿಯಲ್ಲಿ ಬಿತ್ತನೆ ಮಾಡದೇ ಆಹಾರ ಉತ್ಪಾದನೆಯಾಗುವುದು ಅಸಾಧ್ಯ. ಎಲ್ಲರಿಗಿಂತ ರೈತನೇ ಶ್ರೇಷ್ಠನಾಗಿದ್ದಾನೆಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಹೇಳಿದರು.

ತಾಲೂಕಿನ ಹರಾಳು ಗ್ರಾಮದಲ್ಲಿ ಕರಿಗಲ್ಲು, ವಿನಾಯಕ, ದೊಡ್ಡಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಪ್ರಯುಕ್ತ ನಡೆದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಗುರುವಾರ ಮಾತನಾಡಿದರು.

ಜಗತ್ತಿಗೆ ಅನ್ನ ನೀಡುವ ರೈತರು ಬಿತ್ತನೆ ಮಾಡಿದರೆ ಮಾತ್ರ ನಮ್ಮ ಆಹಾರ ಸಿಗಲು ಸಾಧ್ಯ. ಕೃಷಿ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಭೂಮಿಗೆ ಬೀಜ ಬಿತ್ತನೆ ಮಾಡಲೇಬೇಕು. ಬಿತ್ತುವುದು ಒಂದು ಬೀಜವಾದರೆ, ಬೆಳೆಯುವುದು ನೂರಾರು ಕಾಳುಗಳು. ದೇವರ ಪ್ರಾರ್ಥನೆ ಇಲ್ಲದೇ ಯಾವುದೇ ಫಲ ಸಿಗಲಾರದು ಎಂದರು.

ಇಡೀ ಜಗತ್ತಿನಲ್ಲಿ ಮಹಿಳೆಗೆ ವಿಶೇಷ ಸ್ಥಾನ ಮಾನ ನೀಡಿರುವುದು ಏಕೈಕ ರಾಷ್ಟ್ರ ಭಾರತ. ಇದೇ ಕಾರಣಕ್ಕೆ ದೇಶಕ್ಕೆ ಭಾರತ ಮಾತೆ ಎಂದು ಕರೆಯಲಾಗುತ್ತಿದೆ. ಈ ಮೂಲಕ ನಮ್ಮ ದೇಶ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ನಮಗೆ ಅನ್ನ ನೀಡುವ ನೆಲಕ್ಕೆ ನಾವು ಭೂಮಿ ತಾಯಿ ಎಂದು ಕರೆಯುತ್ತಿದ್ದೇವೆ. ದೇವರಿಗಿಂತ ಮಿಗಿಲು ತಂದೆ ತಾಯಿ. ಅಂತಹ ತಾಯಿ ರೂಪದಲ್ಲಿ ಅನೇಕ ದೇವತೆಗಳ ದೇವಸ್ಥಾನಗಳು ನಮ್ಮಲ್ಲಿವೆ. ದೊಡ್ಡ ಬಸವೇಶ್ವರ, ಕರಿಯಮ್ಮದೇವಿ ಸೇರಿ ಇತರೆ ದೇವಸ್ಥಾನಗಳನ್ನು ಹೊಂದಿರುವ ಹರಾಳು ಗ್ರಾಮ ಆದರ್ಶ ಹಾಗೂ ಮಾದರಿಯಾಗಿದೆ. ಜಾತಿ ಬೇಧ, ಮೇಲು ಕೀಳು ಇಲ್ಲದೇ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಕೆ.ನೇಮರಾಜ ನಾಯ್ಕ ಮಾತನಾಡಿ, ನಮ್ಮ ದೇಶ ಹೊಂದಿರುವ ಆದ್ಯಾತ್ಮಿಕ, ಧಾರ್ಮಿಕ ನೆಲೆಗಟ್ಟಿನಿಂದಾಗಿ ಎಲ್ಲರೂ ನೆಮ್ಮದಿಯಲ್ಲಿದ್ದೇವೆ. ಎಲ್ಲರಲ್ಲೂ ಸಂಸ್ಕಾರ, ಸಂಸ್ಕೃತಿ ಬೆಳೆಯಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಗ್ರಾಮದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ರೈತರು ಇರುವುದು ವಿಶೇಷವಾಗಿದೆ. ಗ್ರಾಮದ ದೇವಸ್ಥಾನಗಳ ಅಭಿವೃದ್ಧಿಗಾಗಿ ₹60 ಲಕ್ಷ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.


ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೇ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮಹಿಳೆಯರಿಗೆ ಗೌರವ ನೀಡಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಕರು ಇತರೆ ವಿಷಯಗಳಿಗೆ ಕಿವಿಗೊಡದೇ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು.

ತಾಪಂ ಮಾಜಿ ಅಧ್ಯಕ್ಷ ಗುರುಮೂರ್ತಿ ಶ್ಯಾನುಭೋಗರ, ಎರಡು ದಿನಗಳ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಹರಪನಹಳ್ಳಿ ತಗ್ಗಿನಮಠದ ಸದ್ಯೋಜಾತ ಶಿವಾಚಾರ್ಯ, ನಂದೀಪುರದ ಮಹೇಶ್ವರ ಸ್ವಾಮಿ, ಬೆಣ್ಣಿಹಳ್ಳಿ ಮಠದ ಪಂಚಾಕ್ಷರಿ ಶಿವಚಾರ್ಯ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಮುಖಂಡರಾದ ಹರಾಳು ಅಶೋಕ, ಯುಕೆ ಕೊಟ್ರೇಶ್, ಬಸವನಗೌಡ್ರು, ನಂದೀಶ, ತೋಪುರಾಜ, ನ್ಯಾಯಬೆಲೆ ಅಂಗಡಿ ಕೊಟ್ರಯ್ಯ ಇದ್ದರು.