ಸಂಘರ್ಷವಿದ್ದರೂ ಗೆಲುವಿಗೆ ಬಿಜೆಪಿ ಶ್ರಮಿಸುತ್ತಿದೆ

| Published : Apr 14 2024, 01:49 AM IST

ಸಂಘರ್ಷವಿದ್ದರೂ ಗೆಲುವಿಗೆ ಬಿಜೆಪಿ ಶ್ರಮಿಸುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್‌ನೊಂದಿಗೆ ಎಷ್ಟೇ ಸಂಘರ್ಷವಿದ್ದರೂ ಮರೆತು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲುವಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದು ಬಿಜೆಪಿ ಮುಖಂಡ ಎಚ್.ಯೋಗಾ ರಮೇಶ್ ತಿಳಿಸಿದರು. ಅರಕಲಗೂಡಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಮುಖಂಡ ಎಚ್.ಯೋಗಾ ರಮೇಶ್ । ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ಜೆಡಿಎಸ್‌ನೊಂದಿಗೆ ಎಷ್ಟೇ ಸಂಘರ್ಷವಿದ್ದರೂ ಮರೆತು ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದು ಬಿಜೆಪಿ ಮುಖಂಡ ಎಚ್.ಯೋಗಾ ರಮೇಶ್ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಡಿಕೆ ಕಾನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ದೇಶದಲ್ಲಿ ಹೊರಟ ಮಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ಬದಲಾಗಿ ವಿಪಕ್ಷ ಸ್ಥಾನಕ್ಕಾಗಿ ಮಾತ್ರ ಎಂದು ಟೀಕಿಸಿದರು.

ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಮಾತನಾಡಿದರೂ ಪಕ್ಷದ ವಿರುದ್ಧ ಕೆಲಸ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರೂ ಒಟ್ಟಾಗಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನೀವೇ ಬೆಳೆಸಿದ ವ್ಯಕ್ತಿಗಳು ನಿಮ್ಮ ವಿರುದ್ಧವಿದ್ದಾರೆ. ಆದರೆ ನಮ್ಮ ನೋವುಗಳಿದ್ದರೂ ಮರೆತು ನರೇಂದ್ರ ಮೋದಿ ಅವರನ್ನು 3ನೇ ಬಾರಿ ಪ್ರಧಾನಿ ಮಾಡಬೇಕೆಂದು ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು.

‘ಕಳೆದ ಬಾರಿ ತಾಲೂಕಿನ ಮಲ್ಲಿತಮ್ಮನಹಳ್ಳಿ ಗ್ರಾಮಕ್ಕೆ ಬಂದಾಗ ಎ.ಟಿ.ರಾಮಸ್ವಾಮಿ ಅವರನ್ನು ನಮ್ಮ ಹಿರಿಯಣ್ಣ ಎಂದು ಹೇಳಿದ್ದರು. ನಿನ್ನೆ ರಾಮನಾಥಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಮಂಜು ಅವರನ್ನು ಹಾಡಿ ಹೊಗಳಿದ್ದಾರೆ’ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನೋಡಿ ರೇವಣ್ಣ ಮತ್ತು ಪ್ರಜ್ವಲ್ ಇಬ್ಬರೂ ಕಲಿಯಬೇಕು. ಮಂಡ್ಯದಲ್ಲಿ ಎಂಪಿ ಅಭ್ಯರ್ಥಿಯಾದ ಬಳಿಕ ಎಷ್ಟೇ ವೈಶಮ್ಯವಿದ್ದರೂ ಕುಮಾರಸ್ವಾಮಿ ಅವರು ಸುಮಲತಾ ಅವರ ಮನೆಗೆ ತೆರಳಿ, ವಿಶ್ವನಾಥ್ ಅವರನ್ನು ಭೇಟಿ ಮಾಡಿ ಸಹಕಾರ ಕೇಳಿದ್ದಾರೆ. ಈ ಸೌಜನ್ಯವನ್ನು ರೇವಣ್ಣ, ಪ್ರಜ್ವಲ್ ಬೆಳಸಿಕೊಳ್ಳಬೇಕು.

ಯೋಗಾ ರಮೇಶ್‌, ಬಿಜೆಪಿ ಮುಖಂಡ.

ಐನೆಟ್‌ ವಿಜಿ ಹಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಶಾಮೀಲು: ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗಂಭೀರ ಆರೋಪ

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿ ಕಾರ್ಯಕರ್ತ ಐನೆಟ್‌ ವಿಜಯ್‌ ಕುಮಾರ್‌ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ರಾಜಣ್ಣ ಕೂಡ ಶಾಮೀಲಾಗಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಆರೋಪ ಮಾಡಿದ್ದಾರೆ.ಚನ್ನರಾಯಪಟ್ಟಣ ತಾಲೂಕಿನ ಮಂಚಿಗನಹಳ್ಳಿಯಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸರು ಒತ್ತಡಕ್ಕೆ ಸಿಲುಕಿದ್ದಾರೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗಿದ್ದಾರೆ. ಕೆಲವರು ರಾತ್ರೋರಾತ್ರಿ ಹಾಸನದಿಂದ ಪೊಲೀಸರಿಗೆ ಫೋನ್ ಮಾಡಿಸಿದ್ದಾರೆ. ವಿಜಿಯವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಪ್ರಜ್ಞೆ ಇರಲಿಲ್ಲ. ರಾತ್ರಿ ಸ್ವಲ್ಪ ಚೇತರಿಸಿಕೊಂಡ ಮೇಲೆ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. ಮಾರಕಾಸ್ತ್ರ ಬಳಸಿ ಹಲ್ಲೆ ಮಾಡಿದ್ದಾರೆ, ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಅಂಗಡಿ ಧ್ವಂಸಗೊಳಿಸಿದ್ದಾರೆ’ ಎಂದು ದೂರಿದರು. ‘ವಿಜಯ್‌ ಕುಮಾರ್‌ ಅವರಿಗೆ ಮದುವೆಯಾಗಿಲ್ಲ, ಹಿಂದುತ್ವಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮನೆಯಲ್ಲಿ ಏನು ಇಲ್ಲ, ಅವರ ಬಳಿ ಆಸ್ಪತ್ರೆಗೆ ಕಟ್ಟಲು ದುಡ್ಡಿಲ್ಲ. ಬಹಳ ಒಳ್ಳೆಯ ವ್ಯಕ್ತಿತ್ವ. ಅಂತಹವರ ಮೇಲೆ ಹಲ್ಲೆ ಮಾಡಿರುವವರ ಮನಸ್ಥಿತಿ ಹೇಗಿರಬೇಕು? ಅಂತಹ ಕಿಡಿಗೇಡಿಗಳ ಮೇಲೆ ಪೊಲೀಸರು ಕಠಿಣವಾದ ಕ್ರಮ ಜರುಗಿಸಬೇಕಿತ್ತು. ಆದರೆ ಪೊಲೀಸರು ವಿಫಲರಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಹಲ್ಲೆ ಸಂಬಂಧ ನೀಡಿರುವ ಹೆಚ್ಚುವರಿ ದೂರಿನ ಅನ್ವಯ 307 ಕೇಸ್ ದಾಖಲಿಬೇಕು. ವಿಜಿಯವರ ಸಾವಾಗಿದ್ದರೆ ಅವರ ತಂದೆ ತಾಯಿಯನ್ನು ಯಾರು ನೋಡಿಕೊಳ್ಳುತ್ತಿದ್ದರು? ಮಂತ್ರಿಗೆ ಫೋನ್ ಮಾಡಿ ಹಲ್ಲೆ ಮಾಡಿದವರನ್ನು ಬಿಡಿಸುತ್ತಾರೆ. ಇದರಲ್ಲಿ ಯಾ‌‌‌‌ರು ಇದ್ದಾರೆ ಎನ್ನುವುದು ತನಿಖೆಯಾಗಬೇಕು. ವಿಜಯ್‌ ಕುಮಾರ್‌ಗೆ ನ್ಯಾಯ ಸಿಗುವ‌ವರೆಗೂ ಹೋರಾಡುತ್ತೇನೆ. ನ್ಯಾಯ ಕೊಡಿಸುವುದು ಪೊಲೀಸರ ಜವಾಬ್ದಾರಿ. ಜನಪರ ಕೆಲಸ ಮಾಡುವ ಖಾಕಿ ಯಾರೋ ಒಬ್ಬರ ಗುಲಾಮರಾಗಬಾರದು’ ಎಂದು ಹೇಳಿದರು.

ಫೋಟೋ: ಅರಕಲಗೂಡು ಹೊರವಲಯದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಲಾಯಿತು.