ಮನುಷ್ಯ ವೈಜ್ಞಾನಿಕ ಸಂಗತಿಗಳನ್ನು ನಿರ್ಲಕ್ಷಿಸಿ, ಪರಿಸರವನ್ನು ನಾಶ ಮಾಡಿ ತನ್ನ ನಾಶಕ್ಕೆ ಮುನ್ನುಡಿ ಬರೆದುಕೊಳ್ಳುತ್ತಿದ್ದಾನೆ ಎಂದು ಭಾರತ ಜ್ಞಾನವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಹಾನಗಲ್ಲ: ವಿಜ್ಞಾನ ಮನುಷ್ಯನನ್ನು ಮಹಾ ಮಾನವನನ್ನಾಗಿ ಸುಖ ಸಮೃದ್ಧಿಯ ಜೀವನಕ್ಕೆ ನಿರೀಕ್ಷೆ ಮೀರಿದ ಅವಕಾಶಗಳನ್ನು ಮಾಡಿಕೊಟ್ಟಿದೆ. ಆದರೆ ಅದೇ ವೈಜ್ಞಾನಿಕ ಸಂಗತಿಗಳನ್ನು ನಿರ್ಲಕ್ಷಿಸಿ, ಪರಿಸರವನ್ನು ನಾಶ ಮಾಡಿ ತನ್ನ ನಾಶಕ್ಕೆ ಮುನ್ನುಡಿ ಬರೆದುಕೊಳ್ಳುತ್ತಿದ್ದಾನೆ ಎಂದು ಭಾರತ ಜ್ಞಾನವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಚೇಗರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಹಾನಗಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಹಾನಗಲ್ಲ ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ ಪರಿಸರ ಬದುಕಿನ ಭರವಸೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವ್ಯಕ್ತಿ ಅಕ್ಷರ ಜ್ಞಾನ ಮಾತ್ರವಲ್ಲ, ಅಂತರಿಕ್ಷದ ಜ್ಞಾನವನ್ನೂ ಪಡೆದಿದ್ದಾರೆ. ಆದರೆ ನಮ್ಮ ಸುತ್ತ ಉತ್ತಮ ವಾತಾವರಣವನ್ನು ಉಳಿಸಿಕೊಳ್ಳುವುದನ್ನು ಮರೆತಿದ್ದಾನೆ. ಸರ್ಕಾರ ಸಂಘ-ಸಂಸ್ಥೆಗಳು ಜನ ಜಾಗೃತಿ ಮೂಡಿಸುತ್ತಿರುವುದು ಕೂಡ ಸರಿಯಾದ ಪರಿಣಾಮ ಬೀರಲಾರದಷ್ಟು ಪರಿಸರವನ್ನು ತಿರಸ್ಕರಿಸುತ್ತಿದ್ದಾನೆ. ನಮಗಾಗಿಯೇ ಬೇಕಾಗಿರುವ ಉತ್ತಮ ಪರಿಸರವನ್ನು ಉಳಿಸಿಕೊಳ್ಳಲಾರದಷ್ಟು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರ ಪರಿಣಾಮದ ಅರಿವು ಮೂಡಿದೆ. ಆದರೆ ಅದನ್ನು ಸಮತೋಲನದಲ್ಲಿ ಉಳಿಸಿಕೊಳ್ಳುವ ಸಂಗತಿ ಮಾತ್ರ ತೀರಾ ಬೇಸರದ ಸಂಗತಿ. ಈ ಕುರಿತು ಹಳ್ಳಿ ಹಳ್ಳಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಆಶಯ ನುಡಿ ನುಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಸಾಮಾಜಿಕ ಕಳಕಳಿಯ ಸಂಘಟನೆಗಳು ನಿಸ್ವಾರ್ಥವಾಗಿ ಸಾಮಾಜಿಕ ಹಿತಕ್ಕಾಗಿ ಜಾಗೃತಿ ಮೂಡಿಸುತ್ತಿದ್ದರೂ ಅದನ್ನು ಕಡೆಗಣಿಸುತ್ತಿರುವ ಮನುಷ್ಯ ಒಂದು ದಿನ ಪರಿಸರದ ಶಾಪಕ್ಕೆ ಗುರಿಯಾಗುತ್ತಾನೆ. ಪರಿಸರದ ನಾಶದಿಂದ ಆಗುತ್ತಿರುವ ವ್ಯತಿರಕ್ತ ಪರಿಣಾಮ ನಿತ್ಯ ನಮ್ಮ ಗಮನದಲ್ಲಿದ್ದರೂ, ಅದನ್ನು ಉಳಿಸುವ ಜವಾಬ್ದಾರಿ ಮಾತ್ರ ನಮ್ಮದಲ್ಲ ಎಂಬ ತಿರಸ್ಕಾರ ಭಾವ ಎದ್ದು ಕಾಣುತ್ತಿದೆ. ಒಬ್ಬ ವ್ಯಕ್ತಿ ಮಾತ್ರವಲ್ಲ ಇಡೀ ಭೂಮಂಡಲದ ಮನಷ್ಯರೆಲ್ಲ ಪರಿಸರ ಉಳಿಸುವ ಸಂಕಲ್ಪ ಮಾಡುವುದು ಈಗ ಅನಿವಾರ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಹೊಸಮನಿ, ಎಲ್ಲ ಸಂದರ್ಭ, ಸಭೆ ಸಮಾರಂಭಗಳಲ್ಲಿ ತಪ್ಪದೇ ಪರಿಸರ ಜಾಗೃತಿಯ ಕಳಕಳಿ ವ್ಯಕ್ತವಾಗಬೇಕು. ಈಗಿನ ಶಾಲಾ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಪರಿಸರ ಪ್ರಜ್ಞೆ ಬೆಳೆಸಬೇಕು. ಎಲ್ಲವೂ ಸರ್ಕಾರದಿಂದಲೇ ಆಗಬೇಕೆಂಬ ಮನೋಸ್ಥಿತಿಯಿಂದ ಹೊರಬಂದು ನಮ್ಮ ಬದುಕಿಗಾಗಿ ನಾವೇ ಪರಿಸರ ಉಳಿಸುವ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಬಿಜೆವಿಎಸ್ ರಾಜ್ಯ ಸಂಚಾಲಕಿ ರೇಣುಕಾ ಗುಡಿಮನಿ, ಜಿಲ್ಲಾಧ್ಯಕ್ಷ ಜಗದೀಶ ಮಹಾರಾಜಪೇಟ, ಹಾವೇರಿ ತಾಲೂಕು ಅಧ್ಯಕ್ಷ ನಾಗರಾಜ ಹುಡೇದ, ಗೌರವ ಸಲಹೆಗಾರ ಅಶೋಕ ದಾಸರ, ಉಪಾಧ್ಯಕ್ಷ ಗಿರೀಶ ದೊಡ್ಡಮನಿ, ನಿರ್ದೇಶಕರಾದ ರಮೇಶ ಅರಬಾಳ, ರಾಮು ಗೂರನವರ, ಎಂ.ಎಂ. ಹೋತನಹಳ್ಳಿ, ಸುಧಾ. ಎಚ್, ಮಧು ಅಪ್ಪಣ್ಣನವರ, ಸುನಿತಾ ಉಪ್ಪಿನ, ರೇಖಾ ತಿರುಮಲೆ, ಜ್ಯೋತಿ ಸುರಳೇಶ್ವರ ವೇದಿಕೆಯಲ್ಲಿದ್ದರು.