ಭಾರತ ದೇಶ ಕಂಡ ಅಪ್ರತಿಮ ವ್ಯಕ್ತಿ, ದೇಶಕ್ಕೆ ಅಮೂಲ್ಯ ಸಂವಿಧಾನವನ್ನು ರಚಿಸಿಕೊಟ್ಟ ಅದ್ಭುತ ಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ. ನಾವೆಲ್ಲರೂ ಮುಂದಿನ ಪೀಳಿಗೆಗೆ ಡಾ.ಅಂಬೇಡ್ಕರ್ ಜೀವನಾದರ್ಶ, ಮೌಲ್ಯಗಳು, ದೇಶಕ್ಕಾಗಿ ನೀಡಿದ ಸಂವಿಧಾನದ ಆಶಯವನ್ನು ತಿಳಿಸುವ ಜತೆಗೆ ರೂಢಿಸಿಕೊಳ್ಳುವಂತೆ ಮಾಡಬೇಕು.

ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್ ಜೀವನ ಚರಿತ್ರೆ, ಸಾಧನೆಯನ್ನು ಓದಿದರೆ ಸಾಲದು, ಅವರ ಸಂದೇಶ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಭಾರತ ದೇಶ ಕಂಡ ಅಪ್ರತಿಮ ವ್ಯಕ್ತಿ, ದೇಶಕ್ಕೆ ಅಮೂಲ್ಯ ಸಂವಿಧಾನವನ್ನು ರಚಿಸಿಕೊಟ್ಟ ಅದ್ಭುತ ಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ. ನಾವೆಲ್ಲರೂ ಮುಂದಿನ ಪೀಳಿಗೆಗೆ ಡಾ.ಅಂಬೇಡ್ಕರ್ ಜೀವನಾದರ್ಶ, ಮೌಲ್ಯಗಳು, ದೇಶಕ್ಕಾಗಿ ನೀಡಿದ ಸಂವಿಧಾನದ ಆಶಯವನ್ನು ತಿಳಿಸುವ ಜತೆಗೆ ರೂಢಿಸಿಕೊಳ್ಳುವಂತೆ ಮಾಡಬೇಕು. ವಿದೇಶಗಳಲ್ಲಿ ಡಾ. ಅಂಬೇಡ್ಕರ್ ತತ್ವ- ಸಿದ್ದಾಂತ, ಜೀವನಾದರ್ಶ ಕುರಿತು ಸಂಶೋಧನಾ ವಿಷಯಗಳಾಗಿ ಅಧ್ಯಯನ ಮಾಡಲಾಗುತ್ತಿದೆ. ಇದು ಭಾರತೀಯರು ಬಹಳಷ್ಟು ಹೆಮ್ಮೆ ಪಡುವಂತಹ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವಮೂರ್ತಿ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಮುಖಂಡರಾದ ರವಿಕಲಾ, ಮ್ಯಾಥ್ಯು ಮುನಿಯಪ್ಪ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮಾ, ದಲಿತ ಸಂಘಟನೆಗಳು, ವಿವಿಧ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.