ಸಾರಾಂಶ
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ದೇವನಗೊಂದಿ ಟರ್ಮಿನಲ್ ಅನ್ನು ವಿಶೇಷ ಕಂಟೇನರ್ ರೈಲು ಟರ್ಮಿನಲ್ ಆಗಿ ಪರಿವರ್ತಿಸಿದೆ. ಸರಕು ಸಾಗಣೆಗೆ ವಿಶೇಷ ರಿಯಾಯಿತಿಯನ್ನೂ ನೀಡಿದೆ.
ಬೆಂಗಳೂರು : ದೇಶೀಯ ಕಂಟೇನರ್ ಸಂಚಾರ ಅಭಿವೃದ್ಧಿಗೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ದೇವನಗೊಂದಿ ಟರ್ಮಿನಲ್ ಅನ್ನು ವಿಶೇಷ ಕಂಟೇನರ್ ರೈಲು ಟರ್ಮಿನಲ್ ಆಗಿ ಅಧಿಕೃತವಾಗಿ ಪ್ರಾರಂಭಿಸಿದೆ.
ಇದು ಸರಕು ಆಮದು ಮತ್ತು ರಫ್ತು ಕಾರ್ಯಾಚರಣೆ ಉತ್ತೇಜಿಸುವುದು ಮಾತ್ರವಲ್ಲದೆ, ತ್ವರಿತ ಮತ್ತು ಸಾಗಣೆಗೆ ಅನುವು ಮಾಡಿಕೊಡುತ್ತದೆ. ಟರ್ಮಿನಲ್‌ನಲ್ಲಿ ಕಂಟೇನರ್ ಶೇಖರಣಾ ಶುಲ್ಕವನ್ನು ಸ್ಪರ್ಧಾತ್ಮಕವಾಗಿ ಪ್ರತಿ ದಿನಕ್ಕೆ ಪ್ರತಿ ಟಿಇಯುಗೆ (ಇಪ್ಪತ್ತು ಅಡಿ ಸಮಾನ ಕಂಟೇನರ್ ಯೂನಿಟ್) ₹35 ಮಾತ್ರ ನಿಗದಿಪಡಿಸಲಾಗಿದೆ.
ವಾರ್ಫೇಜ್ (ರೈಲ್ವೆ ಆವರಣದಲ್ಲಿ ಇರಿಸಲಾದ ಸರಕು / ಸರಕು ತೆರವಿಗೆ ನಿಗದಿಪಡಿಸಿದ ಉಚಿತ ಸಮಯ ಮೀರಿದ ಸಂದರ್ಭದಲ್ಲಿ ವಿಧಿಸಲಾಗುವ ಶುಲ್ಕ) ಅಥವಾ ನೆಲದ ಬಳಕೆಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ. ಟರ್ಮಿನಲ್‌ನ ಪ್ರವೇಶ ಶುಲ್ಕ ಪ್ರತಿ ರೈಲಿಗೆ ₹80,000 ನಿಗದಿಸಲಾಗಿದ್ದು, ಇದು ಅಗ್ಗವಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ವಿವಿಧ ಬಂದರುಗಳಿಂದ ಬೆಂಗಳೂರಿಗೆ ಮತ್ತು ದೇಶದ ದೂರದ ಸ್ಥಳಗಳಿಗೆ ಸರಕುಗಳ ಸಾಗಣೆಯನ್ನು ಹೆಚ್ಚು ಅಗ್ಗವಾಗಿಸುವ ಗುರಿಯನ್ನು ಈ ಟರ್ಮಿನಲ್ ಹೊಂದಿದೆ. ಆಮದುದಾರರು ಈಗ ವಿವಿಧ ಅಂತಾರಾಷ್ಟ್ರೀಯ ಬಂದರುಗಳಿಂದ ಬೆಂಗಳೂರಿಗೆ ಸರಕುಗಳನ್ನು ಸಾಗಿಸಬಹುದಾಗಿದ್ದು, ರಫ್ತುದಾರರು ಸಹ ಈ ಸೌಲಭ್ಯ ಬಳಸಿಕೊಂಡು ವಿದೇಶಗಳಿಗೆ ಸರಕು ಸಾಗಿಸಬಹುದು. ದೇವನಗೊಂದಿ ಟರ್ಮಿನಲ್ ಹೊಸಕೋಟೆ, ಮಾಲೂರು ಮತ್ತು ವೈಟ್‌ಫೀಲ್ಡ್‌ನಂತಹ ಕೈಗಾರಿಕಾ ಪ್ರದೇಶಗಳಿಂದ ಸಾರಿಗೆಗೆ ಪ್ರಮುಖ ಕೇಂದ್ರವಾಗಿದೆ.
;Resize=(128,128))
;Resize=(128,128))