ಕಾಂಗ್ರೆಸ್‌ನ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಬುಧವಾರ ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪದ ಅವರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್‌ನ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯು ಬುಧವಾರ ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪದ ಅವರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.ಆರ್.ವಿ.ದೇವರಾಜ್ ಅವರ ಪುತ್ರ ಆರ್.ವಿ.ಯುವರಾಜ್ ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನ ನರೆರವೇರಿಸಿ ಅಂತಿಮ ಸಂಸ್ಕಾರ ನೆರವೇರಿಸಿದರು. ಬಳಿಕ ಪೊಲೀಸರು ಸರ್ಕಾರದ ಆದೇಶಾನುಸಾರ ಪೊಲೀಸರು ಮೂರು ಸುತ್ತು ಕುಶಾಲುತೋಪು ಹಾರಿಸಿ, ಧ್ವಜವಂದನೆ ಮೂಲಕ ಸರ್ಕಾರದಿಂದ ಶ್ರದ್ಧಾಂಜಲಿ ಅರ್ಪಿಸಿದರು. ರಾಷ್ಟ್ರ ಧ್ವಜವನ್ನು ಮೃತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಲಾಸಿಪಾಳ್ಯದ ನಿವಾಸದಿಂದ ಪಾರ್ಥಿವ ಶರೀರವನ್ನು ಮೃತರ ಸ್ವಗ್ರಾಮ ಸೋಮನಹಳ್ಳಿಗೆ ವಾಹನದಲ್ಲಿ ಕೊಂಡೊಯ್ಯಲಾಯಿತು. ಸೋಮನಹಳ್ಳಿಯ ಅವರ ತೋಟದಲ್ಲಿ ಬೆಳಗ್ಗೆಯಿಂದಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿತ್ತು. ವಿವಿಧ ರಾಜಕೀಯ ಗಣ್ಯರು, ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಅಗಲಿದ ಗಣ್ಯನಿಗೆ ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸಿದರು. ಆರ್.ವಿ. ದೇವರಾಜ್ ಅವರ ಪತ್ನಿ, ಮಗ ಮತ್ತು ಮಗಳು ಅಂತಿಮ ವಿದಾಯ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಿದರು.ಮೂರು ಬಾರಿ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಹಲವು ವರ್ಷಗಳ ಕಾಲ ಸಾರ್ವಜನಿಕ ಸೇವೆ ಸಲ್ಲಿಸಿದ್ದ ಆರ್.ವಿ.ದೇವರಾಜ್ ಅವರು ಬುಧವಾರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆಂದು ತೆರಳುವಾಗ ಮಾರ್ಗಮಧ್ಯೆ ಹೃದಯಾಘಾತವಾಗಿತ್ತು. ಅವರನ್ನು ಮೈಸೂರಿನ ಜಯದೇವ ಆಸ್ತತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಬಳಿಕ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಕಲಾಸಿಪಾಳ್ಯ ನಿವಾಸಕ್ಕೆ ತರಲಾಗಿತ್ತು. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು, ಮಠಾಧೀಶರು, ಚಿತ್ರರಂಗದ ಗಣ್ಯರು, ಸ್ನೇಹಿತರು, ಬಂದುಗಳು ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದರು.