ಸಾರಾಂಶ
-ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು, ಬ್ರಹ್ಮಶ್ರೀ ನಾರಾಯಣಗುರು ಜಯಂತಿ
----ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ದೋರನಹಳ್ಳಿ ಗ್ರಾಮದ ಡಿ. ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸಲಾಯಿತು.ಶಾಲೆಯ ಮುಖ್ಯಗುರು ಪ್ರಕಾಶ ಬಳ್ಳಾರಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಧೀಮಂತ ನಾಯಕ ದಿ. ಡಿ. ದೇವರಾಜ ಅರಸು ಅವರ ಜೀವನವೇ ನಮಗೆ ಮಾದರಿ. ಅವರ ತತ್ವಾದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದವರಿಗೆ, ದಲಿತರಿಗೆ ಬೆನ್ನೆಲುಬಾಗಿ ನಿಂತು ಮೂಲಭೂತ ಸೌಲಭ್ಯ ಒದಗಿಸಿದ ದೇವರಾಜ ಅರಸು ಅವರು ರೂಪಿಸಿದ ಜನತಾ ವಸತಿ ಯೋಜನೆ , ಭಾಗ್ಯಜ್ಯೋತಿ ಯೋಜನೆ, ಉಳುವವನೆ ಭೂಮಿ ಒಡೆಯ, ಜನತಾ ನ್ಯಾಯಾಲಯ , ಜಿಲ್ಲಾ ನ್ಯಾಯಾಮಂಡಳಿ ಕಾಯ್ದೆ ಜಾರಿ, ಜೀತ ಪದ್ಧತಿ ನಿರ್ಮೂಲನೆಯಂತಹ ಉತ್ಕೃಷ್ಠ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ಆತ್ಮವಿಶ್ವಾಸ ತುಂಬಿದವರು ಎಂದರು.ಉಪನ್ಯಾಸಕ ಕಿರಣ ಹೊಸ್ಮನಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಗಳು ಹಾಗೂ ತತ್ವಾದರ್ಶಗಳು ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದೆ. ಇವರು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ದಲಿತರು, ಹಿಂದುಳಿದ ವರ್ಗಗಳ ಸಮುದಾಯವನ್ನು ಉನ್ನತಮಟ್ಟಕ್ಕೆ ಏರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಇವರು ಸಲ್ಲಿಸಿದ ಸೇವೆ ಅನುಪಮ ಎಂದು ಹೇಳಿದರು.
ದಲಿತರ, ಹಿಂದುಳಿದ, ಸಮಾಜದ ಏಳಿಗೆಗೆ ಶ್ರಮಪಟ್ಟವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಇವರ ಕ್ರಾಂತಿ ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಸೀಮಿತವಾಗದೇ ಇಡೀ ದಕ್ಷಿಣ ಭಾರತದಾದ್ಯಂತ ಪಸರಿಸಿತ್ತು ಎಂದು ಮಾಹಿತಿ ನೀಡಿದರು.ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿ ಶಿವರಾಜ ಕನ್ಯಾಕೋಳೂರು ವಾಚನ ಮಾಡಿದರು.
ಶಶಾಂಕ ಚಿಕ್ಕಮಠ, ಸಿದ್ಧಾರೂಢ ಅವರು ಪೂಜೆ ಸಲ್ಲಿಸಿದರು. ಶ್ರೀಶೈಲ್ ಡಂಬಾಳ ನಿರೂಪಿಸಿದರು.ಕಾಲೇಜಿನ ಪ್ರಾಂಶುಪಾಲ ಮಹೇಶ ಪತ್ತಾರ, ಉಪನ್ಯಾಸಕರು ಶಿಕ್ಷಕರು, ಪ್ರಥಮ ದರ್ಜೆ ಸಹಾಯಕರು, ವಸತಿ ನಿಲಯಪಾಲಕರು ಇದ್ದರು.
----23ವೈಡಿಆರ್3: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಡಿ. ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಿಸಲಾಯಿತು.