ಸಾರಾಂಶ
ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ನಡೆಯಿತು. ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.
ಹಾನಗಲ್ಲ: ಡಿ. ದೇವರಾಜ ಅರಸು ಅವರ ಜನಪರ ಕೆಲಸ, ಸಾಧನೆಗಳನ್ನು ಕೇವಲ ಅಂಕಿ, ಅಂಶಗಳಿಂದ ನೋಡುವ ಬದಲಿಗೆ ಹೃದಯದ ಭಾಷೆಯಿಂದ ಅರಿಯುವ ಪ್ರಯತ್ನ ಮಾಡಬೇಕಿದೆ. ಅರಸು ಅವರು ಇನ್ನಷ್ಟು ವರ್ಷಗಳ ಕಾಲ ಬದುಕಿದ್ದರೆ ರಾಜ್ಯದ ರಾಜಕಾರಣದ ದಿಕ್ಕೇ ಬದಲಾಗುತ್ತಿತ್ತು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಯಳವಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮಂಗಳವಾರ ಸಂಜೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ ಘೋಷಣೆಯನ್ನು ಬಹುಬೇಗ ಅರ್ಥೈಸಿಕೊಂಡು ಘೋಷಣೆಗೆ ಮೂರ್ತರೂಪ ನೀಡಿದರು. ದೂರದೃಷ್ಟಿ, ದಕ್ಷತೆಯೊಂದಿಗೆ ಸಾಮಾನ್ಯ ಜನರ ಬದುಕಿನ ದಿಕ್ಕು, ದೆಸೆ ಬದಲಿಸಿದ ಅರಸು ಅವರು ಕರ್ನಾಟಕಕ್ಕೆ ಸಿಕ್ಕಿದ್ದು ಸೌಭಾಗ್ಯ. ಭೂಸುಧಾರಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಾವನೂರು ಆಯೋಗದ ವರದಿಯ ಅನುಷ್ಠಾನ, ಜೀತ ಪದ್ಧತಿ ನಿರ್ಮೂಲನೆ, ವೃದ್ಧಾಪ್ಯ ವೇತನ ಮುಂತಾದ ಯೋಜನೆಗಳನ್ನು ಜಾರಿತಂದು ಜನಾನುರಾಗಿ ಎನಿಸಿದರು. ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ದೊರಕಿಸಿದ ಸಮಾನತೆಯ ಹರಿಹಾರ ಎಂದು ಬಣ್ಣಿಸಿದರು.ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಉಪನ್ಯಾಸಕ ತುಕಾರಾಮ ಲಮಾಣಿ ಉಪನ್ಯಾಸ ನೀಡಿ, ದೇವರಾಜ ಅರಸು ಅವರು ಸಮಾಜದಲ್ಲಿ ಬಡತನ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ಅಪಮಾನಗಳಿಗೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು. ೮ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದರು. ಸಂಪತ್ತು ಮತ್ತು ಅಧಿಕಾರದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿ ಕಾಣಲು ಅಸಾಧ್ಯ ಎಂದು ಅರಸು ಅವರು ಅಚಲವಾಗಿ ನಂಬಿದ್ದರು ಎಂದು ಹೇಳಿದರು.
ಗ್ರೇಡ್-೨ ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಕೆಡಿಪಿ ಸದಸ್ಯರಾದ ಹನೀಫ್ ಬಂಕಾಪುರ, ಮಾರ್ಕಂಡಪ್ಪ ಮಣ್ಣಮ್ಮನವರ, ನಾಗರಾಜ ಮಲ್ಲಮ್ಮನವರ, ಖುರ್ಷಿದ್ ಹುಲ್ಲತ್ತಿ, ಸೋಮಶೇಖರ ಕೋತಂಬರಿ, ಮಂಜುನಾಥ ಬಣಕಾರ, ಬಿಸಿಎಂ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಎಸ್. ಆನಂದ, ವೆಂಕಟೇಶ ಗವಾಯಿ, ಹನುಮಂತ ಕೋಣನಕೊಪ್ಪ, ಎಂ.ಎಸ್. ಪಾಟೀಲ, ಅನಿತಾ ಶಿವೂರ, ಒ.ಬಿ. ರಾಘವೇಂದ್ರ, ಬಿ.ಆರ್. ಪಾಟೀಲ ಮೊದಲಾದವರು ಇದ್ದರು. ವಿದ್ಯಾರ್ಥಿಗಳಾದ ಅನುಷಾ ಹಿರೇಮಠ ಹಾಗೂ ಸಮರ್ಥ ಶಿವೂರ ಡಿ. ದೇವರಾಜ ಅರಸು ಅವರ ಕುರಿತು ಮಾತನಾಡಿದರು.