ಕನ್ನಡಪ್ರಭ ವಾರ್ತೆ ಬೇಲೂರು ಎಬಿಡಿ ಕ್ರಿಕೇಟರ್ಸ್ ವತಿಯಿಂದ ಆಯೋಜಿಸಲಾದ 26ನೇ ಎಚ್.ಡಿ. ದೇವೇಗೌಡ ಕಪ್ ಕ್ರಿಕೆಟ್ ಟೂರ್ನಿ ಅದ್ದೂರಿ ಹಾಗೂ ಯಶಸ್ವಿಯಾಗಿ ನಡೆದಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸಿ. ಎಚ್. ಮಹೇಶ್ ತಿಳಿಸಿದ್ದಾರೆ.ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿ ಕುರಿತು ಮಾತನಾಡಿದ ಅವರು, ಎಚ್.ಡಿ. ದೇವೇಗೌಡ ಕಪ್ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಸುಮಾರು 15 ವರ್ಷಗಳ ಹಿಂದೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರೇ ಇಲ್ಲಿಗೆ ಸ್ವತಃ ಬಂದು ಉದ್ಘಾಟನೆ ಮಾಡಿದ್ದ ಕ್ಷಣಗಳು ಇಂದು ನೆನಪಾಗುತ್ತಿವೆ. ಆ ಸಂಭ್ರಮದ ಪರಂಪರೆ ಇಂದಿಗೂ ಮುಂದುವರಿದಿದೆ ಎಂದು ಹೇಳಿದರು. ಟೂರ್ನಿಯನ್ನು ಅದ್ಧೂರಿಯಾಗಿ ಆಯೋಜಿಸಿರುವ ಎಬಿಡಿ ಕ್ರಿಕೆಟರ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಹಿಂದೆ ಹೊರಗಡೆಯ ತಂಡಗಳು ಮೇಲುಗೈ ಸಾಧಿಸುತ್ತಿದ್ದರೆ, ಈಗ ಸ್ಥಳೀಯ ಯುವಕರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಟದ ಜೊತೆಗೆ ಶ್ರಮಕ್ಕೂ ಮಹತ್ವ ನೀಡಿ ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನು ಬೆಳೆಸಬೇಕು ಎಂದು ಅವರು ಯುವಕರಿಗೆ ಸಲಹೆ ನೀಡಿದರು.ಈ ವೇಳೆ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ದಿನೇಶ್ ಮಾತನಾಡಿ, ದೊಡ್ಡಮೇದುರು ಎ.ಬಿ.ಡಿ ಕ್ರಿಕೆಟರ್ಸ್ ವತಿಯಿಂದ ಜಿಲ್ಲಾ ಮಟ್ಟದ ಜೆಡಿಎಸ್ ಕಪ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸುಮಾರು 15 ತಂಡಗಳು ಭಾಗವಹಿಸಿದ್ದವು ಎಂದು ತಿಳಿಸಿದರು. ಟೂರ್ನಿಯಲ್ಲಿ ಪ್ರಥಮ ಬಹುಮಾನವಾಗಿ ₹50,000 ನಗದು ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನವಾಗಿ ₹25,000 ನಗದು ಹಾಗೂ ಪಾರಿತೋಷಕ ನೀಡಲಾಗುತ್ತಿದೆ. ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುವ ಈ ಪಂದ್ಯಾವಳಿ ಆಯೋಜಕರು, ತೀರ್ಪುಗಾರರು ಹಾಗೂ ಪ್ರಾಯೋಜಕರ ಸಹಕಾರದಿಂದ ಯಶಸ್ವಿಯಾಗಿ ಸಾಗುತ್ತಿದೆ ಎಂದರು.ಜೆಡಿಎಸ್ ಮುಖಂಡ ಅಬ್ದುಲ್ ಖಾದರ್ ಮಾತನಾಡಿ,ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಹೆಸರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಕಪ್ 2026 ಕ್ರಿಕೆಟ್ ಪಂದ್ಯಾವಳಿಯನ್ನು ಈ ಬಾರಿ ಸ್ವಲ್ಪ ಸಣ್ಣ ಮಟ್ಟದಲ್ಲಿ ಆಯೋಜಿಸಲಾಗಿದೆ. ಸ್ಥಳೀಯ ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಸಣ್ಣ ಮಟ್ಟದ ಆಯೋಜನೆಯಾದರೂ ಜನರ ಉತ್ಸಾಹ ಕಡಿಮೆಯಾಗಿಲ್ಲ. ಇಂದು ರಜೆ ದಿನವಲ್ಲದಿದ್ದರೂ ಸಾಕಷ್ಟು ಕ್ರೀಡಾ ಅಭಿಮಾನಿಗಳು ಪಂದ್ಯಾವಳಿಯನ್ನು ವೀಕ್ಷಿಸಲು ಆಗಮಿಸಿದ್ದಾರೆ ಎಂದು ಹೇಳಿದರು.ಪ್ರತಿ ಪಂದ್ಯವೂ ಪೈಪೋಟಿಯಿಂದ ನಡೆಯುತ್ತಿದ್ದು, ಪ್ರತಿಭಾವಂತ ಆಟಗಾರರು ಭಾಗವಹಿಸಿದ್ದಾರೆ. ಈ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿರುವ ವ್ಯವಸ್ಥಾಪಕರು, ದಾನಿಗಳು, ಜೆಡಿಎಸ್ ಮುಖಂಡರು ಹಾಗೂ ವಿಶೇಷವಾಗಿ ಬೇಲೂರಿನ ಜನತೆಗೆ ನನ್ನ ಧನ್ಯವಾದಗಳು. ಇಲ್ಲಿ ಯಾವುದೇ ಕ್ರೀಡೆ ನಡೆದರೂ ಜನರಿಂದ ಉತ್ತಮ ಬೆಂಬಲ ಸಿಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್, ಕಾಚಿಹಳ್ಳಿ ದಿಲೀಪ್ ಮುಖಂಡರು ಉಪಸ್ಥಿತರಿದ್ದರು.