ಸಾರಾಂಶ
ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳಪತ್ರಿಕೆಯಲ್ಲಿ ಕೆಲಸ ಮಾಡುವವರೆಲ್ಲರೂ ಇಂದು ಒತ್ತಡದಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದ್ದು, ಅದನ್ನು ಸಹಿಸಿಕೊಳ್ಳುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತೆ ರಶ್ಮಿ ಎಸ್. ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವೇ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ, ಹೀಗಾಗಿ ಈ ಒತ್ತಡವನ್ನು ಆನಂದದಿಂದ ಅನುಭವಿಸಿ ಕೆಲಸ ಮಾಡಬೇಕು ಎಂದರು.
ಸಿದ್ದ ಚೌಕಟ್ಟುಗಳಿಂದ ನಾವು ಹೊರ ಬರಬೇಕು. ಇಂದು ನಾವು ಮಾಡುತ್ತಿರುವ ಪತ್ರಿಕೋದ್ಯಮ ಐದಾರು ಪದಗಳಲ್ಲಿ ಮುಗಿದು ಹೋಗುತ್ತಿದೆ. ಹೀಗಾಗದೇ ಮೈಯೆಲ್ಲ ಕಣ್ಣು, ಕಿವಿಯಾಗಿಟ್ಟು ಕೆಲಸ ಮಾಡಿದರೇ ಪತ್ರಕರ್ತ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.ಕೊಪ್ಪಳ ಮೀಡಿಯಾ ಕ್ಲಬ್ ಯಾವುದೇ ಫಲಾಪೇಕ್ಷೆ, ದೇಣಿಗೆ ಪಡೆಯದೇ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಮಾತನಾಡಿ, ಪತ್ರಿಕೋದ್ಯಮದಲ್ಲಿ ದುಡಿಯುವವರಿಗೆ ಇದೊಂದು ಸೇವೆ. ಇಲ್ಲಿ ಉದ್ಯಮಿಗಳು ವಾಸ್ತವದಲ್ಲಿ ಪಿಲ್ಡಿಗಿಳಿದು ಕೆಲಸ ಮಾಡುವುದಿಲ್ಲ.ಪತ್ರಕರ್ತ ಕೊಡುವ ವರದಿಗಳು ಜನರ ತಲೆ ಮುಟ್ಟೋದಲ್ಲ, ಹೃದಯ ಮುಟ್ಟಬೇಕು. ಅಪ್ರಿಯವಾದ ಸತ್ಯವನ್ನು ಜನರಿಗೆ ಹೇಳಬಾರದು. ನಮ್ಮ ಬೆನ್ನು ನಾವು ತಟ್ಟಿಕೊಳ್ಳಬಾರದು ಎಂದರು.
ಹಿರಿಯ ಪತ್ರಕರ್ತ ಜಗನ್ನಾಥ ದೇಸಾಯಿ ಮಾತನಾಡಿ, ಇಂದಿನ ಜಮಾನದಲ್ಲಿ ಕರ್ತವ್ಯದ ಜತೆಗೆ ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಬೇಕು. ಈಚೆಗಿನ ದಿನಗಳಲ್ಲಿ ನಮ್ಮ ಕಣ್ಣೆದುರಿಗೆ ಹಲವು ಪತ್ರಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ. ಮಾತನಾಡಿ, ಪತ್ರಕರ್ತರ ರಕ್ಷಣೆಗೆ ವಿಶೇಷ ಕಾನೂನು ಅಗತ್ಯವಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೆಬ್ಬಾಳ ಹಿರೇಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಹಿರಿಯ ಪತ್ರಕರ್ತ ಮಹೇಶಗೌಡ ಭಾನಾಪೂರ, ವಿಡಿಯೋ ಜರ್ನಲಿಸ್ಟ್ ಗಳಾದ ವಿನಾಯಕ ಸಿಂಗ್, ಹಿರಿಯ ಪತ್ರಿಕಾ ವಿತರಕರಾದ ಮಹೇಶ ಚಕ್ರಸಾಲಿ, ಫೋಟೋ ಜರ್ನಲಿಸ್ಟ್‌ಗಳಾದ ಪ್ರಕಾಶ ಕಂದಕೂರು, ಭರತ ಕಂದಕೂರು ಅವರಿಗೆ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ನಾಭಿರಾಜ ದಸ್ತೇನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸಂಜಯ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿ, ವೀರಯ್ಯ ಹಿರೇಮಠ ಸ್ವಾಗತಿಸಿದರು. ಶ್ರೀಕಾಂತ ಅಕ್ಕಿ ಸನ್ಮಾನಿತರ ಪರಿಚಯ ಮಾಡಿದರು.