ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜೊತೆಗೆ ಸಾಮಾಜಿಕ ಜ್ಞಾನ ಬೆಳೆಸಿ: ಶ್ರೀಧರ್

| Published : Jul 08 2024, 12:36 AM IST

ಸಾರಾಂಶ

ಶಿವಮೊಗ್ಗದ ವಿನೋಬನಗರದ ದಾಮೋದರ ಕಾಲೋನಿ ಭುವನೇಂದ್ರ ಉದ್ಯಾನವನದಲ್ಲಿ ಭಾನುವಾರ ಪರೋಪಕಾರಂ ಕುಟುಂಬದಿಂದ ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಕ್ಕಳಲ್ಲಿ ಶೈಕ್ಷಣಿಕ ಜ್ಞಾನದೊಂದಿಗೆ ಸಾಮಾಜಿಕ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಸುತ್ತಮುತ್ತಲಿನ ಸಮಾಜ, ಪರಿಸರ, ಸಾಮಾಜಿಕ ವ್ಯವಸ್ಥೆ, ನೈತಿಕ ಶಿಕ್ಷಣ, ರಾಷ್ಟ್ರಪ್ರೇಮ ಮತ್ತಿತರೆ ಅಂಶಗಳು ಸಾಮಾಜಿಕ ಜ್ಞಾನದ ಭಾಗವಾಗಬೇಕೆಂದು ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ.ಶ್ರೀಧರ್ ಹೇಳಿದರು.

ಪರೋಪಕಾರಂ ಕುಟುಂಬದ ವತಿಯಿಂದ 791ನೇ ಕಾರ್ಯಕ್ರಮದ ಸಂದರ್ಭದಲ್ಲಿ ಭಾನುವಾರ ವಿನೋಬನಗರದ ದಾಮೋದರ ಕಾಲೋನಿಯಲ್ಲಿರುವ ಭುವನೇಂದ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪರಿಸರದ ವೈವಿಧ್ಯತೆಗೆ ಧಕ್ಕೆ ಬಾರದಂತೆ ನಡೆಯಲು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಸಕಲ ಜೀವರಾಶಿಗಳ ಅಸ್ತಿತ್ವದಲ್ಲೇ ಮಾನವನ ಹಿತ ಅಡಗಿದೆ ಎಂಬುದನ್ನು ಮನದಟ್ಟು ಮಾಡಿಸಿ ಪರಿಸರ ಪ್ರಜ್ಞೆ ಹೆಚ್ಚಿಸಬೇಕೆಂದು ಕರೆ ನೀಡಿದರು.

ಮಕ್ಕಳಲ್ಲಿ ಮೌಲ್ಯ ಕಲಿಸಬೇಕು. ಪೋಷಕರ ನಡೆ-ನುಡಿ ಮಕ್ಕಳಿಗೆ ಮಾದರಿಯಾಗಿರಬೇಕು. ಪೊಳ್ಳುತನ ಮೈಗೂಡಿಸದೆ ಉತ್ತಮ ಮೌಲ್ಯ ಮೈಗೂಡಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಪರೋಪಕಾರಂ ಕುಟುಂಬ ಕೇವಲ ವಿಶ್ವ ಪರಿಸರ ದಿನಾಚರಣೆ ದಿನದಂದಷ್ಟೇ ಗಿಡ ನೆಡದೆ ಮಳೆಗಾಲ ಪೂರ್ತಿ ಹಸರೀಕರಣ ಅಭಿಯಾನ ನಡೆಸಲಿದೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ ನೆಟ್ಟ ಸಸಿಗಳ ಆರೈಕೆ ಮಾಡಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ ನಿಮಿತ್ತ ಕಿರಣ್ ಆರ್. ಮತ್ತು ಕೀರ್ತಿ ದಂಪತಿ ತಮ್ಮ ಮಕ್ಕಳು ಮತ್ತು ಪರೋಪಕಾರಂ ಕುಟುಂಬದ ಸದಸ್ಯರೊಂದಿಗೆ ಸಸಿಗಳನ್ನು ನೆಡಲಾಯಿತು.

ಎನ್.ಎಂ.ಲೀಲಾಬಾಯಿ, ಅನಿಲ್ ಹೆಗ್ಡೆ, ಮೆಸ್ಕಾಂ ನಿವೃತ್ತ ಎಂಜಿನಿಯರ್ ಶಿರೂರ್‍ಕರ್, ಎಂ.ಶ್ರೀಕಾಂತ್, ಕಾರ್ಪೆಂಟರ್ ಕುಮಾರ್, ಕಿರಣ್ ಎಸ್., ಕೀರ್ತಿ ದರ್ಜಿ, ಪ್ರಭು ಟ್ರಾನಿಕ್ಸ್‍ನ ಸುರೇಶ್ ಪ್ರಭು, ಕೆ.ಎಸ್.ವೆಂಕಟೇಶ್ , ಕೃಷ್ಣಮೂರ್ತಿ, ಮಾಲಿನಿ ಕಾನಡೆ, ಜಯಸ್ವಾಮಿ, ಕೆ.ಎಸ್.ಸುರೇಶ್, ಜಗದೀಶ್, ರಾಘವೇಂದ್ರ ಪೈ, ವಿಜಯ್ ಕಾರ್ತಿಕ್, ವೈಶಾಖ, ಚರಿತಾ, ಶ್ರೀಯಾನ್ ಮತ್ತಿತರರು ಭಾಗವಹಿಸಿದ್ದರು.