ಸಾರಾಂಶ
ಹಿರೇಉಡ-ಗೊಲ್ಲರಹಟ್ಟಿ ಗ್ರಾಮದ ವೆಂಕಟೇಶ್ವರ ಸ್ವಾಮಿ ನೂತನ ಶಿಲಾಮೂರ್ತಿ, ನೂತನ ದೇವಾಲಯದ ಉದ್ಘಾಟನೆ ಹಾಗೂ ಗೋಪುರ ಶಿಖರ, ಕಳಶ ಪ್ರತಿಷ್ಠಾಪನಾ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಗೊಲ್ಲ ಜನಾಂಗದವರು ಆಚರಣೆ ಮಾಡುವಂತಹ ಹಳೆ ಮೂಡ ನಂಬಿಕೆ ಮತ್ತು ಕಂದಾಚಾರದ ಸಂಪ್ರದಾಯ ತೊರೆದು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುತ್ತಾ ನಾಗರಿಕ ಸಮಾಜದಲ್ಲಿ ಒಂದಾಗಿ ಜೀವಿಸುತ್ತೀರಬೇಕು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಬುಧುವಾರ ತಾಲೂಕಿನ ಹಿರೇಉಡ-ಗೊಲ್ಲರಹಟ್ಟಿ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಜೀಣೋದ್ಧಾರ ಸೇವಾ ಸಮಿತಿ ವತಿಯಿಂದ ನಿರ್ಮಾಣ ಮಾಡಿರುವ ವೆಂಕಟೇಶ್ವರ ಸ್ವಾಮಿ ನೂತನ ಶಿಲಾಮೂರ್ತಿ ಮತ್ತು ನೂತನ ದೇವಾಲಯದ ಉದ್ಘಾಟನೆ ಹಾಗೂ ಗೋಪುರ ಶಿಖರ, ಕಳಶ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿನ ಎಲ್ಲಾ ಗೊಲ್ಲರ ಹಟ್ಟಿ ದೇವಾಲಯಗಳ ನಿರ್ಮಾಣಕ್ಕೆ ಸರ್ಕಾರದ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದೆ ಎಂದು ಹೇಳುತ್ತಾ, ಗ್ರಾಮದಲ್ಲಿ ದೇವಾಲಯಗಳು ಇದ್ದರೆ ಶಾಂತಿ ಸಮಾಧಾನ ದೊರೆಯುವ ಜೊತೆಗೆ ಸಾಮರಸ್ಯದಿಂದ ಜೀವಿಸಲು ಸಾಧ್ಯ ಎಂದರು. ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.ಕಾಂಗ್ರೇಸ್ ಪಕ್ಷದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಗ್ರಾಮಗಳಲ್ಲಿ ದೇವಾಲಯಗಳಿರುವುದರಿಂದ ಪ್ರತಿನಿತ್ಯವೂ ದೇವರಿಗೆ ಪೂಜಾ ಕಾರ್ಯ ನಡೆಯಬೇಕು. ಧಾರ್ಮಿಕ ಭಾವನೆ ಬೆಳೆಸಿಕೊಳ್ಳುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಈ ವೇಳೆ ಗ್ರಾಮದ ಪ್ರಮುಖರಾದ ಗೋವಿಂದಪ್ಪ, ಪ್ರಹ್ಲಾದ್, ಉಮೇಶ್, ರಂಗನಾಥ್, ಶ್ರೀಧರ್, ತಾಪಂ ಮಾಜಿ ಅಧ್ಯಕ್ಷೆ ರೂಪಾ ಶ್ರೀಧರ್ ಸೇರಿ ಗ್ರಾಮಸ್ಥರಿದ್ದರು.