ಹಾನಗಲ್ಲ: ಭಾರತದ ಪ್ರಜಾಪ್ರಭುತ್ವ ಆಡಳಿತ ಮಾದರಿಯಾದುದಲ್ಲದೆ, ಇಲ್ಲಿ ಚುನಾಯಿತರಾದವರು ತಮ್ಮ ಜವಾಬ್ದಾರಿ, ದೇಶಪ್ರೇಮವನ್ನು ಉಳ್ಳವರಾಗಿ ಸೇವಾಭಾವದಿಂದ ನಡೆದರೆ ದೇಶದ ಹಿತ ಕಾಯಲು ಸಾಧ್ಯ ಎಂದು ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಎಸ್. ಅಕ್ಕಿವಳ್ಳಿ ತಿಳಿಸಿದರು.

ಹಾನಗಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಎನ್‌ಸಿಜೆಸಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಶಿಸ್ತು. ಶಾಲಾ ಹಂತದಲ್ಲಿಯೇ ಸಂವಿಧಾನದ ಅರಿವು ಮೂಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರೆಯಲು ಸಾಧ್ಯ. ಈಗಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಶಾಲಾ ಹಂತದಲ್ಲಿ ನಾವು ನಡೆದ ದಾರಿ ಭವಿಷ್ಯದ ಜೀವನದಲ್ಲಿ ಉತ್ತಮ ಅವಕಾಶಕ್ಕೆ ದಾರಿಯಾಗುತ್ತದೆ. ನಮ್ಮ ಸಂಸ್ಥೆಯಿಂದ ಶಾಲೆ ಅಭಿವೃದ್ಧಿಗೆ ಬೇಕಾಗುವ ಎಲ್ಲ ಅನುದಾನ ನೀಡಲು ಸಿದ್ಧ. ಮಕ್ಕಳ ಶೈಕ್ಷಣಿಕ ಉನ್ನತಿಗೆ ಬೇಕಾಗುವ ಶಿಕ್ಷಕರು ಹೆಚ್ಚು ಪರಿಶ್ರಮ ಹಾಕಬೇಕು. ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಕುಮಾರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಿರಂಜೀವಿ ಆಡೂರ, ಶರಣರ ಕಾಯಕ ನಿಷ್ಠೆ ಈ ನಾಡಿನ ಜನಮನದಲ್ಲಿ ಹಾಸುಹೊಕ್ಕಾಗಿದೆ. ಹಾನಗಲ್ಲ ಪೌರಾಣಿಕ ಪ್ರಸಿದ್ಧ ಪ್ರದೇಶ. ಮಹಾಭಾರತದ ಪಾಂಡವರು ಅಜ್ಞಾತವಾಸದಲ್ಲಿದ್ದ ಈ ಹಾನಗಲ್ಲು ವಿರಾಟನಗರವಾಗಿತ್ತು. ಈ ಪ್ರದೇಶದಲ್ಲಿ ಧರ್ಮ ನಿಷ್ಠತೆಗೆ ಹೆಚ್ಚು ಪ್ರದೇಶವಿದೆ. ಇದು ಮಹಾಪುರುಷರ ನಾಡು. ಹಾನಗಲ್ಲ ಲಿಂ.ಕುಮಾರಶಿವಯೋಗಿಗಳವರು ಇಡೀ ನಾಡು ಕಂಡ ಆಧ್ಯಾತ್ಮ ಶಕ್ತಿ. ಇದು ಜ್ಞಾನದ ಯುಗ. ಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮ ಜ್ಞಾನ ಸಂಪತ್ತು ಉತ್ತಮಗೊಳ್ಳಬೇಕು. ಸಮಾಜಮುಖಿ ಚಿಂತನೆ ಬೇಕು ಎಂದರು.

ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಸಂತೋಷ ವಡ್ಡರ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯೋಪಾಧ್ಯಾಯ ಎಸ್.ಆರ್.ದಾಸರ, ವಿದ್ಯಾರ್ಥಿ ಸಂಸತ್ ಪ್ರಧಾನಿ ನಿರಂಜನಗೌಡ ಪಾಟೀಲ, ಉಪಪ್ರಧಾನಿ ಸುಮಯಾಬಾನು ಜಮಾದಾರ ವೇದಿಕೆಯಲ್ಲಿದ್ದರು.

ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ನಾಗರಾಜ ಉದಾಸಿ, ರವಿ ಮೂಡ್ಲಿಯವರ, ಸುರೇಶ ರಾಯ್ಕರ, ಮಾಲತೇಶ ಚಿಕ್ಕಣ್ಣನವರ, ರವಿರಾಜ ಕಲಾಲ, ಭೀಮನಗೌಡ ಕೂಕನಗೌಡ್ರ, ಯಲ್ಲಪ್ಪ ಶೇರಖಾನೆ, ಅಶೋಕ ಹಂಗರಗಿ, ಬಾಸ್ಕರ ಹುಲಮನಿ, ಮಂಜುಳಾ ಬೇದ್ರೆ, ರೇಖಾ ಶೆಟ್ಟರ ಅತಿಥಿಗಳಾಗಿದ್ದರು.


ಮುಖ್ಯ ಶಿಕ್ಷಕ ಸುರೇಶ ದಾಸರ ಸ್ವಾಗತಿಸಿದರು. ಶಿಕ್ಷಕರಾದ ಚೈತ್ರಾ ಮಡಿವಾಳರ ಹಾಗೂ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಚಿನ್ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಮಮತಾ ಮುಗಳಕ್ಕಿ ವಂದಿಸಿದರು.