ಮುಂಗಾರು ಮಳೆಯು ವಾಡಿಕೆಗೆ ಮುನ್ನ ಬಂದಿರುವುದರಿಂದ ರೈತರು ಗೊಬ್ಬರ ಬಿತ್ತನೆ ಬೀಜವನ್ನು ಸಿದ್ಧಮಾಡಿಟ್ಟುಕೊಂಡು, ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಸುತ್ತೂರು

ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಧ್ಯಕ್ತವಾಗಿ ಚಾಲನೆ ನೀಡಿದರು.

ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಅಭಿಯಾನದ ಕುರಿತು ಮಾಹಿತಿ ನೀಡುತ್ತಾ, ಮೇ 27 ರಿಂದ ಜೂ. 12ರವರೆಗೆ ಮುಂದಿನ 15 ದಿನಗಳು ಜಿಲ್ಲೆಯಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ಕೇಂದ್ರ ವತಿಯಿಂದ 3 ತಂಡದೊಂದಿಗೆ ಜಿಲ್ಲಾದಾದ್ಯಂತ 135 ಹಳ್ಳಿಗಳಲ್ಲಿ 200 ಸಭೆಗಳನ್ನು ನಡೆಸಿ, ಹೊಸ ತಂತ್ರಜ್ಞಾನಗಳು ಮತ್ತು ಪ್ರಯೋಗಾಲಯಗಳಲ್ಲಿ ಮಾಡಿದ ಸಂಶೋಧನಾ ಕಾರ್ಯಗಳನ್ನು ರೈತರ ಹೊಲಗಳಿಗೆ ಲಭ್ಯವಾಗುವಂತೆ ಮಾಡಲು, ರೈತರಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಹೊಸ ಬೀಜ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸಲು ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಅಭಿಯಾನದಲ್ಲಿ ಸುಮಾರು 22,000 ರೈತರಿಗೆ ಮಾಹಿತಿ ನೀಡಲು ಯೋಜಿಸಲಾಗಿದೆ. ಈ ಅಭಿಯಾನಕ್ಕೆ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳು, ಆಯಾ ರಾಜ್ಯದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಪ್ರಗತಿಪರ ರೈತರು ಆಗಮಿಸುವುದಾಗಿ ಅವರು ಹೇಳಿದ್ದಾರೆ.

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಜಂಟಿ ತೋಟಗಾರಿಕೆ ನಿರ್ದೇಶಕ ಎಚ್.ಎಂ. ನಾಗರಾಜು, ಮುಂಗಾರು ಮಳೆಯು ವಾಡಿಕೆಗೆ ಮುನ್ನ ಬಂದಿರುವುದರಿಂದ ರೈತರು ಗೊಬ್ಬರ ಬಿತ್ತನೆ ಬೀಜವನ್ನು ಸಿದ್ಧಮಾಡಿಟ್ಟುಕೊಂಡು, ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡಬೇಕು ಎಂದು ಕರೆ ನೀಡಿದರು.

ಬೀಜೋಪಚಾರ, ಸಮಗ್ರ ಪೋಶಕಾಂಶಗಳ ಹಾಗೂ ರೋಗ/ಕೀಟಗಳ ನಿರ್ವಹಣೆಯನ್ನು ಕೃಷಿ ತಂತ್ರಜ್ಞರ ಸಲಹೆಯಂತೆ ಪಾಲಿಸಲು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಮಾತನಾಡಿ, ರೈತರು ರಾಸಾಯನಿಕ ಮುಕ್ತ ಬೆಳೆಯನ್ನು ಬೆಳೆಯಲು ಸಲಹೆ ನೀಡಿದರು. ಕೇಂದ್ರ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಅಭಿಯಾನಕ್ಕೆ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ರೈತರು ಹೆಚ್ಚು ಇಳುವರಿ ಹಾಗೂ ಹಣಗಳಿಸುವ ದಾವಂತದಿಂದ ಭೂಮಿಗೆ ಹೆಚ್ಚು ರಾಸಾಯನಿಕಗಳನ್ನು ಹಾಕುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಲ್ಲಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಆದಕಾರಣ, ರೈತರು ಸಾವಯವ ಕೃಷಿಯ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಲು ಕರೆನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕೃಷಿ ತಜ್ಞರ ಸಲಹೆಯೊಂದಿಗೆ ಬೆಳೆಯಲು ರೈತರಿಗೆ ಕರೆನೀಡಿದರು. ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸಿ ಸಾವಯವ ಕೃಷಿಯತ್ತ ರೈತರು ತಮ್ಮ ಚಿತ್ತವನ್ನು ಬೆಳೆಸಿಕೊಳ್ಳಲು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೃಷಿ ವಿಷಯ ತಜ್ಞರ ಮಾಹಿತಿಯೊಂದಿಗೆ ಉತ್ತಮ ಬೆಳೆಯನ್ನು ಬೆಳೆಯಿರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ರೈತರಿಗೆ ಕರೆನೀಡಿದರು.

ಜಿ.ಎಲ್. ತ್ರಿಪುರಾಂತಕ ಸ್ವಾಗತಿಸಿದರು, ಮಹದೇವಪ್ರಸಾದ್ ನಿರೂಪಿದರು. ಕೆ.ಪಿ. ಬಸವರಾಜು ವಂದಿಸಿದರು. 300ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.