ಸಾರಾಂಶ
ರಾಣಿಬೆನ್ನೂರು: ಯಾದವ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಮಾಡಬೇಕು ಎಂದು ಹಲವು ದಿನಗಳ ಹೋರಾಟ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಗೊಲ್ಲ ಸಮುದಾಯಕ್ಕೆ ನಿಗಮ ಮಂಡಳಿ ಮಾಡಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ತಾಲೂಕಿನ ಬೇಲೂರು ಗ್ರಾಮದ ಹಾಲಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಜಿಲ್ಲಾ ಹಾಗೂ ಗ್ರಾಮ ಘಟಕದ ಯಾದವ ಸಂಘದ ಸಂಯುಕ್ತಾಶ್ರಯದಲ್ಲಿ ಕೃಷ್ಣ ಜಯಂತಿ, ಜಿಲ್ಲಾ ಯಾದವ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಹಾಗೂ ಪ್ರಶಸ್ತಿ ವಿಜೇತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾದವ ಸಮಾಜ ಸಮಾಜದಲ್ಲಿ ಮನ್ನಣೆ ಬರಬೇಕಾದರೆ ಸಮುದಾಯಕ್ಕೆ ಸಂಘಟನೆ, ಶಿಕ್ಷಣ, ಹೋರಾಟ ಇರಬೇಕು. ಯಾದವ ಸಮುದಾಯದ ಜನರು ಶಿಕ್ಷಣವಂತರು ಅವರಲ್ಲಿ ಪ್ರತಿಯೊಬ್ಬರು ಶಿಕ್ಷಕರಾಗಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದ ಒಗ್ಗಟ್ಟಿಗೆ ಎಲ್ಲರೂ ಶ್ರಮಿಸಬೇಕು. ರಾಜಕಾರಣದಲ್ಲಿ ಸಮಾಜದವರೂ ಬೆಳೆಯಬೇಕಾದರೆ ಸಮಾವೇಶಗಳು ಯಶಸ್ವಿಯಾಗಿ ನಡೆಯಬೇಕು. ಆಗ ಮಾತ್ರ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.ದೇವರು ಇದ್ದಾನೆ ಇಲ್ಲವೂ ಗೊತ್ತಿಲ್ಲ ಆದರೆ ನಮ್ಮ ನಂಬಿಕೆಯ ನನಗೆ ದೇವರು, ಕಾಣದ ದೇವರು, ಮಾತನಾಡದ ದೇವರಿಗೆ ನಾನು ಮಂತ್ರಿ ಆಗಿದೆ. ಗುರುಗಳು ನಮ್ಮ ಪಾಲಿನ ದೇವರು, ನಮ್ಮ ಮನಸ್ಸೆ ದೇವರು, ನಂಬಿಕೆ ದೇವರು, ಗುರುವೇ ದೇವರು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಆಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಸಣ್ಣ ಸಮಾಜ ಬೆಳೆಸುವ ಕೆಲಸ ಆಗಬೇಕು. ಎಲ್ಲರೂ ಒಗ್ಗಟ್ಟಾನಿಂದ ಜಾಗೃತಿ ಹೊಂದಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ. ಗುರುಗಳು ಸಮಾಜದ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು, ಸಮಾಜಕ್ಕೆ ಅಭಿವೃದ್ಧಿ ನಿಗಮ ಮಾಡಬೇಕು ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ನಾವು ಸಮಾಜವನ್ನು ಬೆಳೆಸಿದರೆ ಸಮಾಜ ನಮ್ಮನ್ನು ಬೆಳಸುತ್ತದೆ. ಉತ್ತರ ಭಾರತದಲ್ಲಿ ೨೨ಕೋಟಿ ಇದ್ದೇವೆ, ಕರ್ನಾಟಕದಲ್ಲಿ ೫೦ಲಕ್ಷ ಇದ್ದೇವೆ ಎಲ್ಲರಿಗೂ ಸಮಾಜದ ಬಗ್ಗೆ ಕಾಳಜಿಬೇಕು. ನಮ್ಮ ದ್ವನಿ ವಿಧಾನಸೌದ ಗೋಡೆ ಮುಟ್ಟುವಂತೆ ನಾವು ಸಂಘಟಿತರಾಗಬೇಕು. ಸಮಾಜದ ವ್ಯಕ್ತಿ ಶಕುನಿಯಾದರೇ ಸಮಾಜ ಛಿದ್ರವಾಗುತ್ತದೆ. ಅದೇ ವ್ಯಕ್ತಿ ವೀರಭದ್ರ ಆದರೇ ಸಮಾಜ ಮುಂದೆ ಬರುತ್ತದೆ ಎಂದರು.ಕಳೆದ ಇಪ್ಪತ್ತು ವರ್ಷದಿಂದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹೋರಾಟ ನಡೆಯುತ್ತಿತ್ತು, ಆದರೇ ಸರ್ಕಾರ ಕಾಡ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ನಮ್ಮಲ್ಲಿ ಒಡಕು ಸೃಷ್ಟಿ ಮಾಡಿತ್ತು, ಇದನ್ನು ಯಾರು ಪ್ರಶ್ನೆ ಮಾಡಲಿಲ್ಲ. ಆದ್ದರಿಂದ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ರಾಜಕೀಯವಾಗಿ ಪ್ರಾಬಲ್ಯ ಹೊಂದಬೇಕಾದರೆ ನಮ್ಮ ಸಮಾಜದ ನಾಯಕರಿಗೆ ಹಿನ್ನಡೆಯಾದಾಗ ಪ್ರತಿಭಟನೆಗೆ ಇಳಿಯಬೇಕು. ಆಗ ಮಾತ್ರ ಸಮಾಜ ರಾಜಕೀಯವಾಗಿ ಬಲವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸಮಾಜದ ಯುವಕರು ಶಿಕ್ಷಣ ವಂತರಾಗಬೇಕು, ಹೋರಾಟ ಜೀವದ ಅಂಗವಾಗಬೇಕು. ಸಮಾವೇಶಗಳ ಸಮಾಜದ ಸಂಘಟನೆಗೆ ದಾರಿದೀಪವಾಗುತ್ತೆ. ನಮ್ಮ ಸಮಾಜದ ಬಡ ಜನರನ್ನು ಅನ್ಯ ಸಮಾಜಕ್ಕೆ ಮತಾಂತರ ಮಾಡುತ್ತಿದ್ದಾರೆ. ಆದ್ದರಿಂದ ನಾವುಗಳು ಜಾಗೃತರಾಗಿ ಹೋರಾಟ ಮಾಡಬೇಕು ಎಂದರು.ಚಿತ್ರದುರ್ಗದ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಬೇಲೂರು ಗ್ರಾಮದ ಹಾಲಸ್ವಾಮಿ ಸಂಸ್ಥಾನಮಠದ ಶಿವಯೋಗಿ ಹಾಲಸ್ವಾಮೀಜಿ ಸಾನಿಧ್ಯ ವಹಿಸಿದರು, ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹೊನ್ನಪ್ಪ ಹಾಲಗಿ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಹಾಗೂ ಯಾದವ ಸಂಘದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ, ಪ್ರದಾನ ಕಾರ್ಯದರ್ಶಿ ಉಮಾಶಂಕರ ಬಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗ್ರಾಪಂ ಅಧ್ಯಕ್ಷೆ ಸುಧಾ ಕಾಟೇನಹಳ್ಳಿ, ಯಾದವ ಸಮಾಜ ತಾಲೂಕಾಧ್ಯಕ್ಷ ಡಾ.ಸೋಮಲಿಂಗಪ್ಪ ಚಿಕ್ಕಳ್ಳವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡ್ರ, ಕೆಂಪಣ್ಣ ಗೊಲ್ಲರ, ಹೇಮಣ್ಣ ಗೊಲ್ಲರ, ತಿಮ್ಮಣ್ಣ ಗೊಲ್ಲರ, ಶ್ರೀನಿವಾಸ ಗೊಲ್ಲರ, ಮಾಲತೇಶ ಮರಿಗೌಡ್ರ, ಮಹೇಶಪ್ಪ ಎನ್., ವಿವಿಧ ತಾಲೂಕಾಧ್ಯಕ್ಷ ತಿಮ್ಮಾರೆಡ್ಡಿ, ಪುಟ್ಟರಾಜ ಯಾದವ, ಪ್ರೇಮಾ ಬೆಂಗಳೂರು, ಶಿಕ್ಷಕಿ ಜಯಲಕ್ಷ್ಮಿ ಆರ್ ಸೇರಿದಂತೆ ಮತ್ತಿತರು ಇದ್ದರು.