ಅಭಿವೃದ್ಧಿಗೆ ಯಾವುದೇ ಪಕ್ಷ ಇಲ್ಲ: ಸಿ.ಟಿ.ರವಿ

| Published : Oct 22 2024, 12:13 AM IST

ಸಾರಾಂಶ

ಚಿಕ್ಕಮಗಳೂರು, ಅಭಿವೃದ್ಧಿಗೆ ಯಾವುದೇ ಪಕ್ಷ ಇಲ್ಲ. ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಿದರೆ ಅದರ ಫಲ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತೇಗೂರು-ರಾಂಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಭಿವೃದ್ಧಿಗೆ ಯಾವುದೇ ಪಕ್ಷ ಇಲ್ಲ. ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಿದರೆ ಅದರ ಫಲ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ತೇಗೂರಿನಲ್ಲಿ ₹16 ಕೋಟಿ ವೆಚ್ಚದ ತೇಗೂರು-ರಾಂಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ತೇಗೂರು ಮತ್ತು ರಾಂಪುರದ ರಸ್ತೆ ಅಭಿವೃದ್ಧಿಗೆ 2022-23ನೇ ಸಾಲಿನಲ್ಲಿ ₹16 ಕೋಟಿ ಮಂಜೂರು ಮಾಡಿಸಿದ್ದೆವು. ಈ ವರ್ಷದ ಕೊನೆಗೆ ಮೆಡಿಕಲ್ ಕಾಲೇಜು ಕಾಮಗಾರಿ ಪೂರ್ಣಗೊಂಡು, ಮುಂದಿನ ವರ್ಷ ಕೊನೆ ವೇಳೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣ ಗೊಳ್ಳಲಿದೆ. ಮೆಡಿಕಲ್ ಕಾಲೇಜಿಗೆ ಓಡಾಡಲು ಉತ್ತಮ ರಸ್ತೆ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ₹108 ಕೋಟಿ ಹಣವನ್ನು ಲೋಕೋಪಯೋಗಿ ಇಲಾಖೆಗೆ 2023 ರಲ್ಲಿ ಮಂಜೂರು ಮಾಡಿಸಲಾಗಿತ್ತು. ಅದರಲ್ಲಿ ₹16 ಕೋಟಿ ಹಣವನ್ನು ಎರಡೂ ಕಡೆ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿತ್ತು ಎಂದರು.ತೇಗೂರು ಭಾಗ ಭವಿಷ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾಣುವ ಪ್ರದೇಶವಾಗಿದೆ. ಈಗಾಗಲೇ ಮೆಡಿಕಲ್ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಸೈನ್ಸ್ ಸೆಂಟರ್, ಕೇಂದ್ರೀಯ ವಿದ್ಯಾಲಯ ಬಂದಿದೆ. ಕದ್ರಿಮಿದ್ರಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಇದರೊಂದಿಗೆ ಒಂದು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ತರಬೇತಿ ಮತ್ತು ಆಟವಾಡಲು ಅನುಕೂಲವಾಗುವ ಸ್ಟೇಡಿಯಂಗಾಗಿ ಜಾಗ ಗುರುತಿಸಲಾಗಿದೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಸಹ ಇದೇ ಭಾಗದಲ್ಲಿ ಹಾದುಹೋಗಲಿದೆ. ಇದಕ್ಕಾಗಿ ಸಮಗ್ರ ಯೋಜನಾ ವರದಿ ಸಲ್ಲಿಸಿ, ಕೇಂದ್ರ ಸರ್ಕಾರದಿಂದ ಮಂಜೂರಾತಿಯೂ ಆಗಿದೆ ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಈ ರಸ್ತೆಗಳು ಚಿಕ್ಕಮಗಳೂರು ಜನರ ಕನಸಾಗಿತ್ತು. ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ನಂತರ ಈ ಭಾಗದಲ್ಲಿ ವ್ಯಾವಹಾರಿಕವಾಗಿ ದೊಡ್ಡದಾಗಿ ಬೆಳವಣಿಗೆ ಕಾಣಬಹುದು. ಭೂಮಿಗೂ ಉತ್ತಮ ಬೆಲೆ ಬರಲಿದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಗ್ರಾ.ಪಂ.ಅಧ್ಯಕ್ಷೆ ರಾಧಾ, ನಗರಸಭೆ ಸದಸ್ಯ ಪರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಬೇಬಿ ಜಾನ್, ಜಯಶ್ರೀ, ಸಹಾಯಕ ಇಂಜಿನಿಯರ್ ಗವಿರಂಗಪ್ಪ ಇದ್ದರು. 21 ಕೆಸಿಕೆಎಂ 1ಚಿಕ್ಕಮಗಳೂರಿನ ತೇಗೂರು-ರಾಂಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕ ಎಚ್‌.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಇದ್ದರು.