ಕಳೆದ ಐದು ವರ್ಷದಲ್ಲಿ ಕಲಬುರಗಿಯಲ್ಲಿ ಅಭಿವೃದ್ಧಿ ಕುಂಠಿತ: ಪ್ರಿಯಾಂಕ್‌

| Published : Apr 29 2024, 01:43 AM IST / Updated: Apr 29 2024, 09:51 AM IST

ಸಾರಾಂಶ

ಖರ್ಗೆ ಸಾಹೇಬರ ಅವಧಿಯಲ್ಲಿ ಪ್ರಾರಂಭಗೊಂಡ ಈ ಯೋಜನೆ ಜಾಧವ್ ಅವಧಿ ಮುಗಿಯುತ್ತ ಬಂದರೂ ಹಾಗೆ ಉಳಿದಿದೆ. ಈ ಬಗ್ಗೆ ಜಾಧವ್ ಬಾಯಿ ಬಿಡುವುದಿಲ್ಲ‌. ಆದರೆ ನನ್ನನ್ನು ಟೀಕಿಸಲು ಬಾಯಿ ತೆಗೆಯುತ್ತಾರೆ: ಪ್ರಿಯಾಂಕ್‌ ಖರ್ಗೆ

  ಕೊಲ್ಲೂರು/ಚಿತ್ತಾಪುರ : ಕಳೆದ ಐದು ವರ್ಷದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ಆಗಿಲ್ಲ‌ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೊಲ್ಲೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಹೇಗೆ ಕುಂಠಿತಗೊಂಡಿದೆ ಎನ್ನುವುದಕ್ಕೆ ತಾಜಾ ಉದಾಹರಣೆ ಎಂದರೆ ವಾಡಿ ಬಳಿ ನಡೆಯುತ್ತಿರುವ ರೇಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ನಿಂತು ಹೋಗಿರುವುದು. ಖರ್ಗೆ ಸಾಹೇಬರ ಅವಧಿಯಲ್ಲಿ ಪ್ರಾರಂಭಗೊಂಡ ಈ ಯೋಜನೆ ಜಾಧವ್ ಅವಧಿ ಮುಗಿಯುತ್ತ ಬಂದರೂ ಹಾಗೆ ಉಳಿದಿದೆ. ಈ ಬಗ್ಗೆ ಜಾಧವ್ ಬಾಯಿ ಬಿಡುವುದಿಲ್ಲ‌. ಆದರೆ ನನ್ನನ್ನು ಟೀಕಿಸಲು ಬಾಯಿ ತೆಗೆಯುತ್ತಾರೆ ಎಂದರು.

ದಿನಬಳಕೆ ವಸ್ತುಗಳ ಬೆಲೆ‌ಇಳಿಸಿ ಅಚ್ಚೇ ದಿನ್ ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಮತ್ತಷ್ಟು ಬೆಲೆ ಏರಿಸಿದರು. ಎಲ್ಲಿದೆ ಅಚ್ಚೇದಿನ್? ಎಂದು ಪ್ರಶ್ನಿಸಿದ ಸಚಿವರು, ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಆರ್ಟಿಕಲ್ 371ಜೆ ಜಾರಿಗೊಳಿಸಿದ್ದೇವೆ. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದು ನಾವು ಜನರಿಗೆ ನೀಡುವ ಅಚ್ಚೇದಿನ್ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ 25 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಆ ಮೂಲಕ ಮಹಿಳೆಯರ ಸಬಲೀಕರಣ, ಕೂಲಿ ಕಾರ್ಮಿಕರಿಗೆ ನೆರವು, ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಸಂಕಲ್ಪ ಇದೆ. ನಿಮ್ಮ ಆಶೀರ್ವಾದ ರಾಧಾಕೃಷ್ಣ ಅವರ ಮೇಲೆ ಇರಲಿ ಎಂದರು‌.

ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ್ ಪಾಟೀಲ ಮಾತನಾಡಿ, ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಲ್ಲ ಸಮೂದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತದೆ. ನಿಮ್ಮ ಮತಗಳ ಮೂಲಕ ರಾಧಾಕೃಷ್ಣ ಅವರಿಗೆ ನೀಡುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಮೆಹೆಮೂದ್ ಸಾಹೇಬ್, ಎಸ್ ಆರ್ ಕೊಲ್ಲೂರು, ಸೇರಿದಂತೆ ಹಲವರಿದ್ದರು.