ಬ್ಯಾಡಗಿಯ ಮುಖ್ಯರಸ್ತೆ ಅಗಲೀಕರಣ ಮೂಲಕ ಅಭಿವೃದ್ಧಿ ಪರ್ವ

| Published : Jul 11 2025, 01:47 AM IST

ಸಾರಾಂಶ

ಅಗಲೀಕರಣ ಹೊರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಸ್ತೆ ಅಗಲೀಕರಣ ವಿಚಾರ ಬ್ಯಾಡಗಿ ಅಭಿವೃದ್ಧಿಗೆ ಸಂಬಂಧಿಸಿದ್ದು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಮೆಣಸಿನಕಾಯಿ ಮಾರುಕಟ್ಟೆ ಹೊರತುಪಡಿಸಿ ಜನರು ಬದುಕಲು ಮತ್ಯಾವುದೇ ಅವಕಾಶವಿಲ್ಲ ಎಂದರು.

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಯಾವುದೇ ಷರತ್ತುಗಳಿಲ್ಲದೇ ಅಲ್ಲಿನ ಮಾಲೀಕರು ಹಿಂಪಡೆದುಕೊಂಡಿದ್ದು, ಪಟ್ಟಣದ ಅಭಿವೃದ್ಧಿ ವಿಚಾರವಾಗಿ ಅವರು ತೆಗೆದುಕೊಂಡ ಐತಿಹಾಸಿಕ ನಿಲುವಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಮುಖ್ಯರಸ್ತೆ ಅಗಲೀಕರಣ ಪರ ಹೋರಾಟಗಾರರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಮುಖ್ಯರಸ್ತೆ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಮುಖ್ಯರಸ್ತೆಯಲ್ಲಿನ ಜನರ ಹಠಮಾರಿ ಧೋರಣೆ ಎಲ್ಲರಿಗೂ ಬೇಸರ ವ್ಯಕ್ತವಾಗಿತ್ತು. ಕಳೆದ 14 ವರ್ಷದಿಂದ ಕೋರ್ಟ್‌ನಲ್ಲೇ ಕಾಲ ಕಳೆಯಲಾಗಿತ್ತು. ಅದರೆ ಹೋರಾಟ ತಾರ್ಕಿಕ ಅಂತ್ಯವನ್ನು ಕಂಡಿದ್ದು ಬ್ಯಾಡಗಿ ತಾಲೂಕಿನ ಮಟ್ಟಿಗೆ ಇದೊಂದು ಐತಿಹಾಸಿಕ ದಿನವಾಗಿದೆ. ಕಳೆದ 14 ವರ್ಷದಿಂದ ಬ್ಯಾಡಗಿ ಸಮಗ್ರ ಜನತೆ ಯಾವುದನ್ನು ಇಚ್ಛೆಪಟ್ಟಿದ್ದರೋ ಅದು ಕೈಗೂಡಿದೆ. ಇಂದಾದರೂ ಅವರೆಲ್ಲರೂ ಸೇರಿ ಸದಿಚ್ಛೆಯಿಂದ ಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ಹಿಂಪಡೆಯಲು(ಜಾಯಿಂಟ್ ಮೆಮೋ) ಸಹಿ ಹಾಕಿದ್ದು, ಐತಿಹಾಸಿಕ ನಿರ್ಣಯಕ್ಕೆ ಸಾಕ್ಷಿಯಾಗಿದೆ ಎಂದರು.

ಬದುಕಲು ಅವಕಾಶ ಸಿಕ್ಕಿದೆ: ಅಗಲೀಕರಣ ಹೊರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಸ್ತೆ ಅಗಲೀಕರಣ ವಿಚಾರ ಬ್ಯಾಡಗಿ ಅಭಿವೃದ್ಧಿಗೆ ಸಂಬಂಧಿಸಿದ್ದು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಮೆಣಸಿನಕಾಯಿ ಮಾರುಕಟ್ಟೆ ಹೊರತುಪಡಿಸಿ ಜನರು ಬದುಕಲು ಮತ್ಯಾವುದೇ ಅವಕಾಶವಿಲ್ಲ ಎಂದರು.

ಅಭಿವೃದ್ಧಿ ಪರ್ವ ಶುರುವಾಗಲಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಮುಖ್ಯರಸ್ತೆಯಲ್ಲಿನ ವರ್ತಕರು ಮನಪರಿವರ್ತನೆ ಮಾಡಿಕೊಂಡಿದ್ದರಿಂದ ಮುಖ್ಯರಸ್ತೆ ಅಗಲೀಕರಣವಾಗುವ ಮೂಲಕ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತ ಸರ್ಕಾರ ಸಂಪೂರ್ಣವಾಗಿ ತಮ್ಮ ಜತೆಗಿರಲಿದೆ ಎಂದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ, ಮುಖಂಡರಾದ ಬಿ.ಎಂ. ಛತ್ರದ, ರಾಜು ಮೋರಿಗೇರಿ, ಸುರೇಶ ಮೇಲಗಿರಿ, ವಿ.ವಿ. ಹಿರೇಮಠ, ಅಶೋಕ ಜೈನ್, ಪ್ರದೀಪ ಸದ್ದಲಗಿ, ಅಂಬಾಲಾಲ್ ಜೈನ್, ಆನಂದ ಜೈನ್, ಚನ್ನಬಸಪ್ಪ ಹುಲ್ಲತ್ತಿ, ದಾನಪ್ಪ ಚೂರಿ, ಚಿಕ್ಕಪ್ಪ ಛತ್ರದ, ಸುರೇಶ ಛಲವಾದಿ, ಎಂ.ಎಲ್. ಕಿರಣಕುಮಾರ, ಪಾಂಡು ಸುತಾರ, ನಾಗರಾಜ ಹಾವನೂರ, ಸುಭಾಸ್ ಮಾಳಗಿ, ಮಹೇಶ ಉಜನಿ, ಎಚ್.ಜಿ. ಮುಳಗುಂದ, ಮಲ್ಲಣ್ಣ ಹುಚ್ಚಗೊಂಡರ, ಬಸವರಾಜ ಸಂಕಣ್ಣನವರ, ದುರ್ಗೇಶ ಗೋಣೆಮ್ಮನವರ, ಮುನಾಫ್ ಎರೇಶೀಮಿ ಸೇರಿದಂತೆ ಇತರರಿದ್ದರು.

ಗೊಂದಲಕ್ಕೆ ತೆರೆ

ಮುಖ್ತರಸ್ತೆ ಅಗಲೀಕರಣ ಎರಡೂ ಬದಿ ಅಗಲೀಕರಣಕ್ಕೆ ನ್ಯಾಯಾಲಯದಿಂದ 66 ಮೀಟರ್‌ಗೆ ಸಮ್ಮತಿ ಸಿಗಬಹುದು. ಬಳಿಕ 6 ಮೀ. ಸೆಟ್ ಬ್ಯಾಕ್ ವಿಚಾರದಲ್ಲಿ ಕಾನೂನು ತೊಡಕುಗಳಿದ್ದು, ನಂತರದ ದಿನಗಳಲ್ಲಿ ಸರ್ಕಾರದ ಜತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೇನೆ ಎನ್ನುವ ಮೂಲಕ ಮುಖ್ಯರಸ್ತೆ ಮಾಲೀಕರಲ್ಲಿದ್ದ ಗೊಂದಲಕ್ಕೆ ಶಾಸಕ ಬಸವರಾಜ ಶಿವಣ್ಣನವರ ತೆರೆ ಎಳೆದರು.

ಅಗಲೀಕರಣದ ಪರ: ನಮ್ಮ ಆಸ್ತಿಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಲ್ಲಿಯವರಗೂ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ಇದೀಗ ನಮ್ಮ ಮನಪರಿವರ್ತನೆಯಾಗಿದ್ದು, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಅಗಲೀಕರಣದ ಪರವಾಗಿ ನಿಲ್ಲುತ್ತೇವೆ. ಇದಕ್ಕೆ ಪ್ರಥಮ ಹೆಜ್ಜೆಯಾಗಿ ಧಾರವಾಡ ಹೈಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ಯಾವುದೇ ಷರತ್ತುಗಳಿಲ್ಲದೇ 72 ಜನರು ಹಿಂದಕ್ಕೆ ಪಡೆದಿದ್ದೇವೆ ಎಂದು ಮುಖ್ಯರಸ್ತೆ ಮಾಲೀಕ ಸಿದ್ದಲಿಂಗಪ್ಪ ಶೆಟ್ಟರ ತಿಳಿಸಿದರು.