ಅಭಿವೃದ್ಧಿಯೇ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ : ಡಿಸಿಎಂ ಡಿ. ಕೆ. ಶಿವಕುಮಾರ್

| N/A | Published : Mar 10 2025, 12:17 AM IST / Updated: Mar 10 2025, 12:00 PM IST

ಅಭಿವೃದ್ಧಿಯೇ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ : ಡಿಸಿಎಂ ಡಿ. ಕೆ. ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ,‌ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. 250 ಕೋಟಿ ರು. ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ

 ಕನಕಪುರ : ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. 

ಕನಕಪುರ ತಾಲೂಕಿನ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಸುಮಾರು 400 ಕೋಟಿ ರು.ಗಳಷ್ಟು ಅನುದಾನ ತಂದಿದ್ದು, ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ,‌ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. 250 ಕೋಟಿ ರು. ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ ಎಂದರು.

ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದ ವರೆಗೆ ಸುಮಾರು 13 ಕೋಟಿ ರು. ವೆಚ್ಚದಲ್ಲಿ ರಸ್ತೆ ಹಾಗೂ ದೊಡ್ಡಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ವೆಚ್ಚ ದಲ್ಲಿ ರು. 14.5 ಕಿಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿರುವುದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ ಎಂದರು. 

ಕನಕಪುರ, ಸಾತನೂರು, ದೊಡ್ಡ ಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ ಇಂದು ಕೆಲಸವನ್ನು ಮಾಡಿ ತೋರಿಸಿದ್ದು ರಸ್ತೆ ಅಭಿವೃದ್ಧಿಗೆ ಎಂದು 135 ಕೋಟಿ, ಹೊಸಕೆರೆ ತುಂಬಿಸಲು 108 ಕೋಟಿ ಖರ್ಚು ಮಾಡಲಾಗುತ್ತಿದೆ. ನಲ್ಲಳ್ಳಿ- ಮುಲ್ಲಹಳ್ಳಿ ಸಂಪರ್ಕ ಸೇತುವೆಗೆ 11 ಕೋಟಿ, ಅರ್ಕಾವತಿಯಿಂದ ನೀರನ್ನು ಎತ್ತಿ ದೊಡ್ಡ ಆಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು 70 ಕೋಟಿಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ 8 ಗ್ರಾಮಗಳ 2 ಸಾವಿರ ಎಕರೆ ಭೂಮಿಗೆ ಉಪಯೋಗವಾಗಲಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕೊಕ್ಕರೆ ಹೊಸಹಳ್ಳಿಯ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 10 ಕೋಟಿ ವೆಚ್ಚದಲ್ಲಿ ಕೆಲಸ ಆರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ:

ನನ್ನ ಕ್ಷೇತ್ರದಲ್ಲಿರುವ ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸಲಿದ್ದು, ಹಂತ,‌ ಹಂತವಾಗಿ ಕೆಲಸಗಳನ್ನು ಮಾಡಲಾಗುವುದು. ಅಧಿಕಾರ ಅವಧಿಯಲ್ಲಿ ಎಲ್ಲಾ ಕಡೆ ನೀರು ತುಂಬಿ ಹರಿಯಬೇಕು. ಚನ್ನಪಟ್ಟಣ, ರಾಮನಗರ, ಮಾಗಡಿ ತಾಲೂಕುಗಳಿಗೆ ಅನೇಕ ಯೋಜನೆಗಳನ್ನು ತಂದಿದ್ದು ಅಲ್ಲಿನ ಜನಕ್ಕೂ ನಾನು ಕೆಲಸ ಮಾಡಿಸುವುದಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.