ಸ್ಥಳೀಯ ರಾಜಕಾರಣಿ ಅಕ್ಷರಸ್ಥನಾದರೆ ಅಭಿವೃದ್ಧಿ ಸಾಧ್ಯ: ಇಒ ಸುಮಲತಾ

| Published : Aug 29 2024, 01:00 AM IST

ಸಾರಾಂಶ

ಸ್ಥಳೀಯ ಮಟ್ಟದ ರಾಜಕಾರಣಿಗಳು ಅಕ್ಷರಸ್ಥರಾದರೆ, ಗ್ರಾಮಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಸ್.ಪಿ. ಸುಮಲತಾ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಸ್ಥಳೀಯ ಮಟ್ಟದ ರಾಜಕಾರಣಿಗಳು ಅಕ್ಷರಸ್ಥರಾದರೆ, ಗ್ರಾಮಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಸ್.ಪಿ. ಸುಮಲತಾ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಆವರಣದ ಸಭಾಂಗಣದಲ್ಲಿ ನಡೆದ, ಗ್ರಾಮ ಪಂಚಾಯಿತಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ, ಸಾಕ್ಷರತಾ ಬೋಧಕರು, ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ಸಲಹೆಗಳನ್ನು ನೀಡಿ ಅವರು ಮಾತನಾಡಿದರು.

ಸರ್ಕಾರ ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನಗಳನ್ನು ನೀಡುತ್ತಿದೆ. ಅದನ್ನು ಸಮರ್ಪಕ ಬಳಸುವುದನ್ನು ಕಲಿಯಬೇಕು. ಯಾರ ಒತ್ತಡಕ್ಕೂ ಮಣಿಯದೇ ಎಲ್ಲ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಲು ಈ ತರಬೇತಿ ಅನುಕೂಲವಾಗಲಿದೆ ಎಂದರು.

ತರಬೇತಿ ಸಂಯೋಜಕಿ ಎಚ್.ಕೆ. ಶೋಭಾ ಮಾತನಾಡಿ, ಹರಿಹರ ತಾಲೂಕಿನಲ್ಲಿ ಒಟ್ಟು 23 ಗ್ರಾಮ ಪಂಚಾಯಿತಿಗಳಿದ್ದು, 356 ಸದಸ್ಯರಿದ್ದಾರೆ. ಅದರಲ್ಲಿ 18 ಗ್ರಾಮ ಪಂಚಾಯಿತಿಗಳಲ್ಲಿ 34 ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರಿಗೆ 34 ಸಾಕ್ಷರತಾ ಬೋಧಕರನ್ನು ಆಯ್ಕೆ ಮಾಡಿ ಮೂರು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜ್, ಹರೀಶ್ ನೋಟಗಾರ, ಬೀರಪ್ಪ, ಮೊಹಮ್ಮದ್ ಅಲಿ, ವಿನಾಯಕ, ಪಾಟೀಲ್, ಮಂಜಣ್ಣ ಉಪಸ್ಥಿತರಿದ್ದರು.