ಸಾರಾಂಶ
ಆಲೂರು ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ ದಾನಿಗಳು ಹಾಗೂ ಸರ್ಕಾರದ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿ ೭೫ ರ ಪಕ್ಕದ ದೇವರಕೆರೆಯಲ್ಲಿ ನಿರ್ಮಿಸಿರುವ ೧೮ ಅಡಿ ಎತ್ತರದ ಶ್ರೀ ವಿಜಯ ಆಂಜನೇಯಸ್ವಾಮಿ ಭವ್ಯ ಮೂರ್ತಿಗೆ ಶಾಸಕ ಸಿಮೆಂಟ್ ಮಂಜು ಪೂಜೆ ನೆರವೇರಿಸಿದರು.
18 ಅಡಿ ಮೂರ್ತಿಗೆ ಪೂಜೆ
ಆಲೂರು: ವಿಜಯ ಆಂಜನೇಯಸ್ವಾಮಿ ದೇವರನ್ನು ನಂಬಿದವರಿಗೆ ಉತ್ತಮ ಮಾರ್ಗದಲ್ಲಿ ಸಾಗಲು ಸದಾ ಆಶೀರ್ವದಿಸುತ್ತದೆ. ಈ ಕ್ಷೇತ್ರವನ್ನು ಯಾತ್ರಿಕರ ಸ್ಥಳವನ್ನಾಗಿ ಮಾರ್ಪಾಡು ಮಾಡಲು ಶ್ರಮಿಸುವುದಾಗಿ ಶಾಸಕ ಸಿಮೆಂಟ್ ಮಂಜು ತಿಳಿಸಿದರು.ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ ದಾನಿಗಳು ಹಾಗೂ ಸರ್ಕಾರದ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿ ೭೫ ರ ಪಕ್ಕದ ದೇವರಕೆರೆಯಲ್ಲಿ ನಿರ್ಮಿಸಿರುವ ೧೮ ಅಡಿ ಎತ್ತರದ ಶ್ರೀ ವಿಜಯ ಆಂಜನೇಯಸ್ವಾಮಿ ಭವ್ಯ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ದೇವರಕೆರೆ ಅಂಗಳದಲ್ಲಿ ನಿರ್ಮಾಣವಾಗಿರುವ ವಿಜಯ ಆಂಜನೇಯಸ್ವಾಮಿ ಮೂರ್ತಿ ನಿಂತಿರುವ ಸ್ಥಳದ ಮೂರು ಭಾಗದಲ್ಲಿ ನೀರು ಆವರಿಸಿದ್ದು ಅಮೋಘವಾಗಿ ಮೂಡಿ ಬಂದಿದೆ. ಗ್ರಾಮಸ್ಥರು, ಸಾರ್ವಜನಿಕರು ಮತ್ತು ಯುವಜನರು ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ. ಈ ಕ್ಷೇತ್ರವನ್ನು ಯಾತ್ರಾ ಸ್ಥಳವಾಗಿ ರೂಪಿಸುವ ಸಂಕಲ್ಪವನ್ನು ಎಲ್ಲರೂ ಸೇರಿ ಮಾಡೋಣ ಎಂದರು.ಭಾನುವಾರ ಮುಂಜಾನೆಯಿಂದಲೇ ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರು ಇಸ್ಕಾನ್ ದೇವಾಲಯದ ವೈಕುಂಠ ಗೌರವದಾಸ್ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದ ನಂತರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೂರ್ತಿ ಲೋಕರ್ಪಣೆಗೊಂಡಿತು.
ಮಾಜಿ ಶಾಸಕರಾದ ಎಚ್.ಎಂ.ವಿಶ್ವನಾಥ್, ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಗ್ರಾಪಂ ಅಧ್ಯಕ್ಷ ಹೇಮಾ ಮಂಜೇಗೌಡ, ಮುಖಂಡರಾದ ಜೈ ಮಾರುತಿ ದೇವರಾಜ್, ಬಿ.ಸಿ.ಶಂಕರಾಚಾರ್, ಎಸ್.ದೇವರಾಜ್, ಲೋಕೇಶ್ ಕಣಗಾಲು, ಗ್ರಾಪಂ ಮಾಜಿ ಅದ್ಯಕ್ಷ ಸಿ.ಡಿ.ಅಶೋಕ್, ವೀರಭದ್ರಸ್ವಾಮಿ, ಗಣೇಶ್ ಧರ್ಮಪುರಿ, ಮಲ್ಲೇಶ್, ನಂದೀಶ್‌ಗೌಡ, ಮಂಜೇಗೌಡ, ಎಂ.ಬಾಲಕೃಷ್ಣ, ಕೃಷ್ಣಗೌಡ, ನಂಜುಂಡೇಗೌಡ ಪೂಜಾ ವಿದಿವಿದಾನಗಳ ನೇತೃತ್ವ ವಹಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು, ಸಾರ್ವಜನಿಕರು ಭೇಟಿ ನೀಡಿ ಪೂಜೆ ಸಲ್ಲಿಸಿದರು.ವಿಜಯ ಆಂಜನೇಯಸ್ವಾಮಿ ಮೂರ್ತಿ ಸುಮಾರು ೧೮ ಅಡಿ ಎತ್ತರವಿದ್ದು, ಪ್ರತಿಷ್ಠಾಪನೆಯಾಗಿರುವ ಸ್ಥಳ ಕೆರೆಯಂಗಳದಲ್ಲಿ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ವಿಶೇಷ ಅಕರ್ಷಣೆಯ ಕೇಂದ್ರವಾಗಿದೆ ಎನ್ನಲಾಗಿದೆ.