ಸಾರಾಂಶ
ಪ್ರಶಾಂತ್ ಕೆಂಗನಹಳ್ಳಿ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಕ್ಷೇತ್ರದಲ್ಲಿರುವ ಬಿಬಿಎಂಪಿಗೆ ವ್ಯಾಪ್ತಿಗೆ ಒಳಪಟ್ಟ ಶಿವಪುರ ಕೆರೆ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಸಂಪೂರ್ಣವಾಗಿ ಕಲುಷಿತಗೊಂಡಿದ್ದ ಕೆರೆಯನ್ನು ಅಭಿವೃದ್ಧಿ ಪಡಿಸಲು ಬಿಬಿಎಂಪಿಯು ಒಂದೂವರೆ ವರ್ಷದ ಹಿಂದೆ ಕಾಮಗಾರಿ ಆರಂಭಿಸಿತ್ತು. ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ನಗರ ಬೆಳೆದಂತೆ ಸ್ಥಳೀಯರು ಹಳೆಯ ಕಟ್ಟಡದ ಅವಶೇಷಗಳನ್ನು ಕೆರೆ ಬದಿ ಸುರಿಯಲು ಆರಂಭಿಸಿದರು. ಅಲ್ಲದೆ ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಕೆರೆಗೆ ಹರಿದು ಕಲುಷಿತಗೊಂಡಿತ್ತು.40 ವರ್ಷಗಳ ಇತಿಹಾಸವಿರುವ ಈ ಕೆರೆ ನೀರನ್ನು ಜನರು ಕುಡಿಯಲು ಬಳಸುತ್ತಿದ್ದರು. ಬಳಿಕ ನಾಗರಿಕತೆ ಬೆಳೆದಂತೆ ಜನರು ನೀರನ್ನು ಕಲುಷಿತಗೊಳಿಸಿದರು. ದನ ಕರುಗಳು ಸಹ ನೀರು ಕುಡಿಯಲು ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು. ಕಲುಷಿತ ನೀರು ಕೆರೆಯ ಒಡಲ ಸೇರಿ ಕೆರೆಯ ಸ್ವರೂಪವೇ ಬದಲಾಗಿತ್ತು. ವಿಷಕಾರಿಯಾಗಿದ್ದ ನೀರು ಕುಡಿದರೆ ದನ ಕರುಗಳು ಬದುಕುಳಿಯುವ ಸಾಧ್ಯತೆ ಇರಲಿಲ್ಲ. ಕೆರೆ ಒಡಲಾಳದಲ್ಲಿದ್ದ ಜಲಚರಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಿತ್ತು. ಇದನ್ನೆಲ್ಲಾ ಅರಿತಿದ್ದ ಸ್ಥಳೀಯರು ಹಲವು ವರ್ಷಗಳಿಂದ ಕೆರೆಯ ಅಭಿವೃದ್ಧಿ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದರು.
ಕೊನೆಗೂ ಅಭಿವೃದ್ಧಿಗೆ ಕಾಲ ಕೂಡಿಬಂದಿತು. ಒಂದುವರೆ ವರ್ಷದ ಹಿಂದೆ ಬಿಬಿಎಂಪಿ ಅಮೃತ ನಗರೋತ್ಥಾನ ಅನುದಾನದಲ್ಲಿ ಶಿವಪುರ ಕೆರೆ ಪುನರುಜ್ಜೀವನಕ್ಕೆ ₹2 ಕೋಟಿ ಅನುದಾನ ನೀಡಲಾಯಿತು. ಅಂದು ಕಾಮಗಾರಿ ಪ್ರಾರಂಭವಾಗಿ ಇಂದಿನವರೆಗೂ ಕುಂಟುತ್ತಾ ಸಾಗುತ್ತಿದೆ. ಕಾಮಗಾರಿ ಕೆಲಸ ಸರಿಯಾಗಿ ಮಾಡಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.ಈಗ ಸದ್ಯಕ್ಕೆ ಹೂಳೆತ್ತುವ ಕಾರ್ಯ ಮುಗಿದಿದೆ. ಸುತ್ತಲೂ ನಡೆಗೆ ಪಥ ಕೆಲಸ ನಡೆಯುತ್ತಿದೆ. ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ಕೆರೆಗೆ ಸೇರದಂತೆ ಪೈಪ್‌ಲೈನ್ ಮಾಡಲಾಗಿದೆ. ತಂತಿ ಬೇಲಿ ಮತ್ತು ಗೇಟ್, ಶೌಚಾಲಯ ಬಾಕಿ ಇದ್ದು ಕೆಲಸ ನಡೆಯುತ್ತಿದೆ.
ಕೆರೆ ಒತ್ತುವರಿ: ಕೆರೆಯು 6 ಎಕರೆ 11 ಗುಂಟೆ ವಿಸ್ತೀರ್ಣ ಇದ್ದು, ಅದರಲ್ಲಿ ಖಾಸಗಿ ಫ್ಯಾಕ್ಟರಿಯವರು 5 ಅಡಿ ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್ ಶ್ರೀಧರ್ ಮಾಹಿತಿ ನೀಡಿದರು.ಸ್ಥಳೀಯ ನಿವಾಸಿ ಧರ್ಮಶ್ರೀ ಮಂಜುನಾಥ್ ಮಾತನಾಡಿ, ಕಲುಷಿತವಾಗಿದ್ದ ಕೆರೆ ಅಭಿವೃದ್ಧಿಯಾಗಿ ಸುತ್ತಮುತ್ತಲ ಜನರ ಆರೋಗ್ಯ ವೃದ್ಧಿಸಲಿ. ಕೆರೆಯು ಸುಂದರ, ಸ್ವಚ್ಚವಾಗಿ ವಾಯುವಿಹಾರಿಗಳಿಗೆ ಅನುಕೂಲವಾಗಲಿ. ಆದರೆ ನಿಧಾನ ಗತಿಯಲ್ಲಿ ಕೆರೆ ಅಭಿವೃದ್ಧಿ ಸಾಗುತ್ತಿದೆ. ಬೇಗ ಕೆಲಸ ಮುಗಿದು ಸುಂದರ ಸ್ವಚ್ಛ ಪರಿಸರ ನಿರ್ಮಾಣವಾಗಲಿ ಎಂದರು.
ಕೆರೆ ಅಭಿವೃದ್ಧಿ ಸರಿಯಾಗಿ ಆಗುತ್ತಿಲ್ಲ. ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಸಂಬಂಧಪಟ್ಟವರು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ನಿವಾಸಿ ಕೆಂಪರಾಜು ದೂರಿದರು.ನಾನು ಶಾಸಕನಾಗಿ ಬಂದ ಮೇಲೆ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೇನೆ. ಸ್ವಚ್ಛ, ಸುಂದರ ಕೆರೆಯನ್ನಾಗಿ ಮಾಡುವ ಮೂಲಕ ಸ್ಥಳೀಯರಿಗೆ ಅನೂಕೂಲ ಮಾಡಿ ಕೊಡಲಾಗುತ್ತದೆ.-ಎಸ್.ಮುನಿರಾಜು, ಶಾಸಕ.