ಸಾರಾಂಶ
ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ 50 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಕಾಲದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ 50 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಕಾಲದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮುಖ್ಯರಸ್ತೆಗೆ ಒಕ್ಕಲಿಗ ಸಂಘದ ವತಿಯಿಂದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ರಸ್ತೆ ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಬೆಂಗಳೂರು ಬುದ್ಧವಂತರಿರುವ ನಗರವೆಂದು ತಜ್ಞರ ವರದಿ ತಿಳಿಸಿದೆ. ಕೆಂಪೇಗೌಡರು ಸರ್ವ ಜನಾಂಗದ ನಾಯಕರು, ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೃಷ್ಣಭೈರೇಗೌಡರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ 50 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದರು.ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಶೇಷವಾಗಿ ಮಾಗಡಿ ಭಾಗದ ಕೆಂಪೇಗೌಡರ ಕಾಲದ ತಾಣಗಳನ್ನು ಅಭಿವೃದ್ಧಿಪಡಿಸಬೇಕೆಂದು ಆದೇಶವಾಗಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಒತ್ತಡದಿಂದ ಚುನಾವಣೆಗೂ ಮುಂಚೆಯೇ 50 ಕೋಟಿ ಮಂಜೂರಾಗಿದೆ. 15 ದಿನದಲ್ಲಿ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಕೃಷ್ಣಭೈರೇಗೌಡರನ್ನು ಕರೆದು ಕೋಟೆ ಅಭಿವೃದ್ಧಿಗೆ ಚಾಲನೆ ಕೊಡಿಸಲಾಗುವುದು. 40 ಕೋಟಿ ವೆಚ್ಚದಲ್ಲಿ ಕೋಟೆ ಒಳಭಾಗದಲ್ಲಿ ಕ್ರೀಡಾಂಗಣ, ವೇದಿಕೆ, ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ನೀಲನಕ್ಷೆ ತಯಾರಿಸಲಾಗುವುದು. 10 ಕೋಟಿ ವೆಚ್ಚದಲ್ಲಿ ಕೆಂಪಾಪುರದಲ್ಲಿ ಭೂಸ್ವಾಧೀನ ಪರಿಹಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಪ್ಪ, ಪುರಸಭಾ ಸದಸ್ಯ ಹೆಚ್.ಜೆ.ಪುರುಷೋತ್ತಮ್, ಮುಖಂಡರಾದ ತೇಜೇಸ್ ಕುಮಾರ್, ಸೀಬೇಗೌಡ, ವಿಜಯ್ ಕುಮಾರ್, ನರಸಿಂಹಮೂರ್ತಿ, ಹೆಚ್.ಜೆ.ರಘು, ರಮೇಶ್, ಡಿ.ಸಿ.ಶಿವಣ್ಣ, ಜಯರಾಮ್, ಮಹಾಂತೇಶ್, ರಾಜಣ್ಣ, ಲಕ್ಷ್ಮಣ ಇತರರು ಭಾಗವಹಿಸಿದ್ದರು.