ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಯುವ ಸಮುದಾಯವು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಂಘಟನೆಯಾಗಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೊಸದುರ್ಗ ತಾಲೂಕಿನ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕಿಬ್ಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಗೀರಥ ಉಪ್ಪಾರ ಸಮಾಜ, ಸಗರ ಭಗೀರಥ ಪತ್ತಿನ ಸಹಕಾರ ಸಂಘ ಹಾಗೂ ಕಿಬ್ಬನಹಳ್ಳಿ ಉಪ್ಪಾರ ಸಮಾಜದ ಸಹಯೋಗದಲ್ಲಿ ನಡೆದ ರಾಜರ್ಷಿ ಶ್ರೀ ಭಗೀರಥ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಸಮಾಜವು ಹಿಂದುಳಿದ ಸಮಾಜವಾಗಿದ್ದು ಹೆಚ್ಚಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜದ ಏಳಿಗೆಗಾಗಿ ಒಗ್ಗೂಡಿ ಕೆಲಸ ಮಾಡಬೇಕು. ಯುವಕರು ಸಂಘಟನಾ ಶಕ್ತಿಯ ಮೂಲಕ ಸಮಾಜದ ಅಭಿವೃದ್ಧಿಯ ಕಡೆ ಹೆಜ್ಜೆ ಹಾಕಬೇಕು. ಎಲ್ಲಾ ಕ್ಷೇತ್ರಗಳಲ್ಲಿಯು ಸಹಾ ಗುರುತಿಸಿಕೊಂಡು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮಾಜದ ಅಭಿವೃದ್ದಿಗಾಗಿ ಉಪ್ಪಾರ ನಿಗಮಕ್ಕೆ ೪೨ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು ಅವರಿಗೆ ನನ್ನ ಧನ್ಯವಾದ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಉಪ್ಪಾರ ಸಮಾಜದ ಶ್ರೇಯೋಭಿವೃದ್ಧಿಗಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಶ್ರೀ ಭಗೀರಥ ಸಮುದಾಯ ಭವನಕ್ಕೆ ಒಂದು ಲಕ್ಷ ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದ ಅವರು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಗೀರಥ ಜಯಂತಿಯಲ್ಲಿ ಪಾಲ್ಗೊಂಡಿರುವುದು ಸಂತೋಷದ ವಿಷಯ ಎಂದರು. ಸಗರ ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಚನ್ನಬಸಪ್ಪ ಉಪನ್ಯಾಸ ನೀಡುತ್ತಾ, ಶ್ರೀ ಭಗೀರಥ ಮಹರ್ಷಿಯವರ ಮಹಾತ್ಕಾರ್ಯದಿಂದ ಭರತ ಭೂಮಿಯಲ್ಲಿ ಗಂಗೆಯು ಏಳು ಕವಲುಗಳಾಗಿ ಹರಿದು ರೈತರ ಉದ್ದಾರಕ್ಕೆ ಹೇಗೆ ಅನುಕೂಲವಾಯಿತು ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಅಧ್ಯಕ್ಷತೆಯನ್ನು ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಕೆ.ಲಿಂಗಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕಲ್ಲೇಶ್, ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನ, ಬೆಸ್ಕಾಂ ಇಲಾಖೆಯ ಜಯಪ್ಪ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಧರಣೇಂದ್ರಕುಮಾರ್, ಸಹಕಾರ ಸಂಘದ ಉಪಾಧ್ಯಕ್ಷ ಬಸವನಹಳ್ಳಿ ಬಸವರಾಜು, ನಗರಸಭಾ ಸದಸ್ಯರಾದ ಶಶಿಕಿರಣ್, ಲೋಕನಾಥ್ ಸಿಂಗ್, ಮುಖಂಡರುಗಳಾದ ಉಮೇಶ್, ಮಂಜು, ಸ್ವಾಮಿ, ರೇಣುಕಯ್ಯ, ಪುಟ್ಟರಾಜು, ಕೃಷ್ಣಪ್ಪ, ಶಿವಕುಮಾರ್, ರಾಜಣ್ಣ, ಮಣಕೀಕೆರೆ ಸುನಿಲ್ ಸೇರಿದಂತೆ ಕಿಬ್ಬನಹಳ್ಳಿ ಪೋಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಮಾಜದ ಎಲ್ಲಾ ಮುಖಂಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೮೫ರಷ್ಟು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾರಂಭಕ್ಕೂ ಮುನ್ನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ತಂಡಗಳು, ಪೂರ್ಣಕುಂಭ ಸ್ವಾಗತದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಮೆರವಣಿಗೆ ನಡೆಯಿತು.