ನಕ್ಸಲ್‌ ಪೀಡಿತ ಬೊಳ್ಳೆಟ್ಟುನಲ್ಲಿ ಅಭಿವೃದ್ಧಿ ಮರೀಚಿಕೆ

| Published : Nov 10 2024, 02:00 AM IST / Updated: Nov 10 2024, 02:01 AM IST

ನಕ್ಸಲ್‌ ಪೀಡಿತ ಬೊಳ್ಳೆಟ್ಟುನಲ್ಲಿ ಅಭಿವೃದ್ಧಿ ಮರೀಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ, ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ನಕ್ಸಲ್‌ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ಮೂಲಸೌಕರ್ಯವಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್‌ ನಡೆದ ಗ್ರಾಮ ಇದಾಗಿದ್ದರೂ ಸರ್ಕಾರ ಇಲ್ಲಿನ ಅಭಿವೃದ್ಧಿಗೆ ಕೈಗೊಂಡ ಕ್ರಮ ಮಾತ್ರ ಶೂನ್ಯ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ, ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಈದುವಿನ ಬೊಳ್ಳೆಟ್ಟು ನಕ್ಸಲ್‌ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ಮೂಲಸೌಕರ್ಯವಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್‌ ನಡೆದ ಗ್ರಾಮ ಇದಾಗಿದ್ದರೂ ಸರ್ಕಾರ ಇಲ್ಲಿನ ಅಭಿವೃದ್ಧಿಗೆ ಕೈಗೊಂಡ ಕ್ರಮ ಮಾತ್ರ ಶೂನ್ಯ.

ಸೇತುವೆ ನಿರ್ಮಿಸಿ ಕೊಡಿ ಸಾಕು:

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟುವ ಸುವರ್ಣ ನದಿಯು ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶದಲ್ಲಿ ಹರಿಯುತ್ತಿದೆ. ಮಳೆಗಾಲದಲ್ಲಿ ಈ ಪ್ರದೇಶ ಜಲದಿಗ್ಬಂಧನಕ್ಕೆ ಒಳಗಾಗುತ್ತದೆ. ಈ ಸಂದರ್ಭ ನೀರಿನಮಟ್ಟ ಏರಿ ಸಂಚಾರಕ್ಕೆ ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಈ ನದಿಗೆ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಈದುವಿನಿಂದ ಸಂಪರ್ಕವಿಲ್ಲ:

ಕಾರ್ಕಳ ತಾಲೂಕಿನ ಈದು ಗ್ರಾಮ‌ ಪಂಚಾಯಿತಿಗೆ ಬೊಲ್ಲೊಟ್ಟು ಸೇರಿದ್ದರೂ, ಈದುವಿನೊಂದಿಗೆ ನೇರ ಸಂಪರ್ಕ ಕಷ್ಟವಾಗಿದೆ. ಈದುವಿಗೆ ಹೋಗಬೇಕಾದರೆ ಸುಮಾರು ನಾಲ್ಕು ಕಿ.ಮೀ. ನಡೆದುಕೊಂಡೇ ಸಾಗಬೇಕು. ಯಾವುದೇ ವಾಹನ ಸಂಚಾರಕ್ಕೆ ಸಾಧ್ಯವಿಲ್ಲ.

ಆದರೆ ಬೊಲ್ಲೊಟ್ಟು ಪ್ರದೇಶಕ್ಕೆ ಸಾಗಲು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿಯಿಂದ ರಿಕ್ಷಾ ಮೂಲಕ ಸಾಗಬಹುದು. ಅದೂ ಇಲ್ಲಿನ ಸ್ಥಳೀಯರೇ ನಿರ್ಮಿಸಿದ ರಸ್ತೆಯಲ್ಲಿ. ಇಲ್ಲಿನ 65 ಕುಟುಂಬಗಳಿಗೆ ಉಪಯೋಗವಾಗುವಂತೆ ಬೊಳ್ಳೆಟ್ಟುವಿನಿಂದ ಮಪಾಲು ಕ್ರಾಸ್‌ ವರೆಗೆ ಸುಮಾರು 3 ಕಿ.ಮೀ. ಕಚ್ಚಾ ರಸ್ತೆಯನ್ನು ಸ್ಥಳೀಯರೇ ತಮ್ಮ ಜಾಗ ಬಿಟ್ಟುಕೊಟ್ಟು ನಿರ್ಮಾಣ ಮಾಡಿದ್ದರು. ಬಳಿಕ ಶಾಸಕ ವಿ.ಸುನಿಲ್ ಕುಮಾರ್, ರಸ್ತೆಯ ಎರಡೂ ಭಾಗಗಳಲ್ಲಿ ತಡೆಗೋಡೆ ನಿರ್ಮಿಸಿ ಕೊಟ್ಟಿದ್ದರು.‌ ಈ ರಸ್ತೆಯಲ್ಲಿ ಕೇವಲ ರಿಕ್ಷಾ ಮಾತ್ರ ಸಾಗಬಹುದಾಗಿದೆ.

ಸಂಚಾರ ಸಂಕಷ್ಟದಿಂದಾಗಿ ಇಲ್ಲಿನ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದು, ಬೆರಳೆಣಿಕೆಯಷ್ಟು ಮಕ್ಕಳು ಹಾಸ್ಟೆಲ್‌ ಸೇರಿ ಶಿಕ್ಷಣ ಪಡೆಯುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿಗೆ ಸೇರಿಸಿ:

ಬೊಳ್ಳೆಟ್ಟು ಪ್ರದೇಶದಲ್ಲಿ ಒಟ್ಟು 65 ಕುಟುಂಬಗಳಿದ್ದು, ಸುಮಾರು ಮುನ್ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿಯ ಜನ ಈದುವನ್ನು ಆಶ್ರಯಿಸದೆ ನಾರಾವಿ ಹಾಗೂ ಬೆಳ್ತಂಗಡಿ ತಾಲೂಕನ್ನು ಆಶ್ರಯಿಸಿದ್ದಾರೆ. ಆದರೆ ಈದು ಗ್ರಾಮ ಕಾರ್ಕಳ ತಾಲೂಕಿನಲ್ಲಿ ಬರುವ ಕಾರಣ ಕೇವಲ ಪಡಿತರ ವ್ಯವಸ್ಥೆಗಾಗಿ ಮಾತ್ರ ಈದುವನ್ನು ಆಶ್ರಯಿಸಬೇಕು. ಆದ್ದರಿಂದ ಬೊಳ್ಳೆಟ್ಟು ಭಾಗವನ್ನು ಈದುವಿನಿಂದ ಬೇರ್ಪಡಿಸಿ ನಾರಾವಿಗೆ ಸೇರಿಸಬೇಕು ಇದರಿಂದ ಬೆಳ್ತಂಗಡಿ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಬೊಳ್ಳೆಟ್ಟಿನ ಹಿರಿಯರು‌.

ಜನಪ್ರತಿನಿಧಿಗಳಿಂದ ಕೇವಲ ಭರವಸೆ:

ಬೊಳ್ಳೆಟ್ಟು ಪ್ರದೇಶದ ಮಠದ ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ಜನತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಅಂದು ಕೇಂದ್ರ ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ, ನಕ್ಸಲ್‌ ಎನ್‌ಕೌಂಟರ್‌ ನಡೆದಿದ್ದ ರಾಮಪ್ಪ ಪೂಜಾರಿ ಮನೆಗೆ ಭೇಟಿ ನೀಡಿ ರಸ್ತೆ ಹಾಗೂ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ದಿ.ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅಂದಿನ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಬೊಳ್ಳೊಟ್ಟುಗೆ ಭೇಟಿ ನೀಡಿ ಭರವಸೆ ನೀಡಿದ್ದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

------------------

ಕೇಂದ್ರ ಮಂತ್ರಿಗಳು, ಅಧಿಕಾರಿಗಳು ಬಂದರೂ ಬೊಳ್ಳೆಟ್ಟು ಅಭಿವೃದ್ಧಿಯಾಗಿಲ್ಲ, ನಕ್ಸಲ್ ಚಟುವಟಿಕೆಗಳು ಆರಂಭವಾಗಿ 21 ವರ್ಷಗಳು‌ ಕಳೆದರೂ ಅಭಿವೃದ್ಧಿಯಾಗಿಲ್ಲ ಎನ್ನುವುದೇ ಬೇಸರ. ಸೇತುವೆ ನಿರ್ಮಾಣವಾಗಿ ಉತ್ತಮ ರಸ್ತೆಯಾದರೆ ಸಾಕು, ಅಭಿವೃದ್ಧಿಯಾದಂತೆ. ಮಳೆಗಾಲವೆಂದರೆ ಶವ ಹೊತ್ತು ಸಾಗಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭ ಬಾಣಂತಿಯರ ಸ್ಥಿತಿ ಹೇಳತೀರದು.

। ಮೊಯಿದ್ದೀನ್ ಬೊಳ್ಳೆಟ್ಟು, ಸ್ಥಳೀಯರು

-------------------ಬೊಳ್ಳೆಟ್ಟು ಹಾಗೂ ಈದು ನಡುವೆ ಸೇತುವೆ ನಿರ್ಮಾಣಕ್ಕಾಗಿ ನಾಲ್ಕು ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಯು ಟೆಂಡರ್ ಹಂತದಲ್ಲಿದೆ.

। ಸೋಮಶೇಖರ್, ಎಂಜಿನಿಯರ್ ಪಿಡಬ್ಲ್ಯುಡಿ