ಪಕ್ಷಿಕೆರೆ: ಪತ್ನಿ, ಮಗುವನ್ನು ಕೊಂದು ಯುವಕ ಆತ್ಮಹತ್ಯೆ

| Published : Nov 10 2024, 01:59 AM IST / Updated: Nov 10 2024, 02:00 AM IST

ಸಾರಾಂಶ

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪತ್ನಿ ಪ್ರಿಯಾಂಕಾ (28) ಹಾಗೂ ಮಗು ಹೃದಯ್ (4)ರನ್ನು ಕೊಂದು ಬಳಿಕ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪತ್ನಿ, ಮಗುವನ್ನು ಕೊಲೆಗೈದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಕ್ಷಿಕೆರೆಯಲ್ಲಿ ನಡೆದಿದೆ.

ಬೆಳ್ಳಾಯರು ರೈಲ್ವೇ ಹಳಿಯಲ್ಲಿ ಶುಕ್ರವಾರ ಮಧ್ಯಾಹ್ನ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪತ್ನಿ ಪ್ರಿಯಾಂಕಾ (28) ಹಾಗೂ ಮಗು ಹೃದಯ್ (4)ರನ್ನು ಕೊಂದು ಬಳಿಕ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಕ್ಷಿಕೆರೆ ಜಂಕ್ಷನ್‌ನಲ್ಲಿ ಹೊಟೇಲ್ ನಡೆಸುತ್ತಿರುವ ಜನಾರ್ದನ ಭಟ್ ಮಗನಾದ ಕಾರ್ತಿಕ್, ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಮಧ್ಯಾಹ್ನ ತನ್ನ ಸ್ಕೂಟರನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿಗೆ ಹೋಗಿದ್ದು, ಬಳಿಕ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ತನಿಖೆ ನಡೆಸಿದ ಪೊಲೀಸರು ಕಾರ್ತಿಕ್ ವಾಸಿಸುತ್ತಿರುವ ಪಕ್ಷಿಕೆರೆ ಪಂಚಾಯಿತಿ ಬಳಿಯ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದ ಪ್ಲಾಟ್ ತೆರಳಿದಾಗ ಮನೆಗೆ ಬಾಗಿಲು ಹಾಕಿದ ಸ್ಥಿತಿಯಲ್ಲಿತ್ತು. ಬಳಿಕ ಒಳಗಡೆ ಹೋಗಿ ಪರಿಶೀಲನೆ ನಡೆಸಿದಾಗ ಆತನ ಪತ್ನಿ ಮತ್ತು ಮಗುವಿನ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದ್ದು, ಮೂಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮೂಲ್ಕಿ ಪೊಲೀಸ್‌ ಠಾಣಾಧಿಕಾರಿ ವಿದ್ಯಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಕಮೀಷನರ್‌ ಭೇಟಿ:

ಸ್ಥಳಕ್ಕೆ ಮಂಗಳೂರು ಕಮೀಷನರ್‌ ಅನೂಪ್ ಅಗರ್ವಾಲ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.ಕಾರ್ತಿಕ್ ಆತ್ಮಹತ್ಯೆ ಮಾಡುವ ಮೊದಲು ವಾಷ್ ರೂಂನ ಕಿಟಕಿ ಗ್ಲಾಸ್ ಒಡೆದು ಅದರಿಂದ ತನ್ನ ಹೆಂಡತಿ ಹಾಗೂ ಮಗುವನ್ನು ಹತ್ಯೆ ಮಾಡಿದ್ದಾನೆ. ಇಬ್ಬರ ದೇಹದ ಬೇರೆ ಬೇರೆ ಭಾಗದಲ್ಲಿ ಗಾಯಗಳಾಗಿವೆ. ಬಳಿಕ ತಾನು ಆತ್ಮಹತ್ಯೆ ಮಾಡಲು ಪ್ಯಾನ್‌ಗೆ ಬಟ್ಟೆ ಕಟ್ಟಿ ಪ್ರಯತ್ನ ಪಟ್ಟಿದ್ದು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜತೆಗೆ ಡೆತ್ ನೋಟ್‌ ಕೂಡ ಬರೆದಿದ್ದು, ಅದರಲ್ಲಿ ಅಂತ್ಯ ಸಂಸ್ಕಾರ, ಆಸ್ತಿ ಯಾರ ಪಾಲಾಗಬೇಕೆಂದು ಬರೆದಿದ್ದು, ತನ್ನ ತಂದೆ ತಾಯಿ ಅಂತ್ಯ ಸಂಸ್ಕಾರ ಮಾಡಬಾರದು ಎಂಬ ಉಲ್ಲೇಖ ಇದೆ. ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಎಂದೂ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ. ತನ್ನ ಅಂತಿಮ ಕ್ರಿಯೆಯನ್ನು ಪತ್ನಿಯ ಮನೆಯವರು ಮಾಡಬೇಕು ಎಂದು ಬರೆದಿದ್ದಾನೆ ಎಂದು ಕಮೀಷನರ್‌ ತಿಳಿಸಿದ್ದಾರೆ.

ಮದುವೆಯಾದ ಬಳಿಕ ಕಾರ್ತಿಕ್‌, ತಂದೆ ತಾಯಿ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲ ಎನ್ನಲಾಗಿದ್ದು, ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ತನ್ನ ಹೆಂಡತಿ ಮಗುವಿನೊಂದಿಗೆ ಇರುತ್ತಿದ್ದ. ಅವರ ಕೋಣೆಗೆ ಪ್ರತ್ಯೇಕ ಕೀ ಇದ್ದು, ಆ ಕೋಣೆಯೊಳಗೆ ತಂದೆ ತಾಯಿ ಹೋಗುತ್ತಿರಲಿಲ್ಲ. ಶುಕ್ರವಾರ ತಂದೆ ಮತ್ತು ತಾಯಿ ತಮ್ಮ ಹೋಟೆಲ್‌ಗೆ ಹೋದ ನಂತರ ಈ ಘಟನೆ ನಡೆದಿದೆ. ಒಂದು ಕೋಣೆಯಲ್ಲಿ ಕಾರ್ತಿಕ್ ಪತ್ನಿ ಮಗು ಕೊಲೆಯಾಗಿ ಬಿದ್ದಿದ್ದರೂ ಇವರಿಗೆ ತಿಳಿದಿರಲಿಲ್ಲ. ರಾತ್ರಿ ಕಾರ್ತಿಕ್ ಕುಟುಂಬ ಹೊರಗೆ ಹೋಗಿರಬಹುದು ಎಂದು ಕಾರ್ತಿಕ್ ತಂದೆ ಭಾವಿಸಿದ್ದು, ಶನಿವಾರ ಮಧ್ಯಾಹ್ನವೇ ಅವರಿಗೆ ವಿಷಯ ಗೊತ್ತಾಗಿದೆ.