ಸಾರಾಂಶ
ಹಾವೇರಿ (ಶಿಗ್ಗಾಂವಿ): ಶಿಗ್ಗಾಂವಿ ಕ್ಷೇತ್ರದಲ್ಲಿ ನಾನು ಏನೂ ಅಭಿವೃದ್ಧಿ ಮಾಡಿಲ್ಲ ಎನ್ನುವವರ ಎಲ್ಲರ ಬಣ್ಣ ನನಗೆ ಗೊತ್ತಿದೆ. ಅವರೆಲ್ಲ ನನ್ನ ನೆರಳಲ್ಲೇ ಬೆಳೆದವರು. ಅವರಿಗೆ ವಿಧಾನಸಭಾ ಮೆಟ್ಟಿಲು ಹತ್ತಿಸಿದವನು ನಾನೇ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ತೇವರಮೆಳಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಒಬ್ಬ ಸಿಎಂ ಆದವರು, ಮಂತ್ರಿಗೆ ಕನಿಷ್ಠ ಸತ್ಯ ಹೇಳುವ ಸೌಜನ್ಯ ಇರಬೇಕು. ಇವರ ಬಳಿ ಎಲ್ಲ ದಾಖಲೆ ಇರುತ್ತವೆ. ರಾಜಕಾರಕ್ಕಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆ.
ನಂಬುವಂತಹ ಸುಳ್ಳಾದರೂ ಹೇಳಬೇಕು. ಸಿಎಂ ಸಿದ್ದರಾಮಯ್ಯ ಅವರು ನಾನು ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ ಮೇಲೆ ನಾನು ಮನೆ ಕಟ್ಟಿಸಿ ಕೊಟ್ಟವರು ಎಲ್ಲರೂ ನನಗೆ ಕರೆ ಮಾಡಿ, ನಮಗೆ ನೀವು ಮನೆ ಕಟ್ಟಿಸಿಕೊಟ್ಟಿದ್ದೀರಿ ಅಂತ ಹೇಳಿದರು. ನಾನು ಅಭಿವೃದ್ಧಿ ಮಾಡಿಲ್ಲ ಎನ್ನುವವರ ಎಲ್ಲರ ಬಣ್ಣ ನನಗೆ ಗೊತ್ತಿದೆ. ಅವರೆಲ್ಲ ನನ್ನ ನೆರಳಲ್ಲೇ ಬೆಳೆದವರು. ಅವರಿಗೆ ವಿಧಾನಸಭಾ ಮೆಟ್ಟಿಲು ಹತ್ತಿಸಿದವನು ನಾನೇ. ಸ್ವಲ್ಪನಾದರೂ ಉಪಕಾರ ಸ್ಮರಣೆ ಇರಬೇಕು ಎಂದು ಹೇಳಿದರು.
ಇಲ್ಲಿಗೆ ಬರುವ ಕಾಂಗ್ರೆಸ್ ಶಾಸಕರಿಗೆ ಅವರ ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಒಂದು ಹಿಡಿ ಮಣ್ಣು ಹಾಕಿಲ್ಲ. ಅವರನ್ನು ಮನೆಗೆ ಕರೆದು ನಿನ್ನ ಕ್ಷೇತ್ರದಲ್ಲಿ ಏನು ಮಾಡಿದ್ದೀರಾ ಎಂದು ಪ್ರಶ್ನಿಸಿ, ಅಲ್ಲಿ ನೋಡುಹೋಗು ಎಂದು ಕಳುಹಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಶಿಧರ ಯಲಿಗಾರ, ಡಿ.ಎಸ್ ಮಾಳಗಿ ಇದ್ದರು.
300 ಕೋಟಿ ಅನುದಾನ ವಾಪಸ್ ಪಡೆದಿದ್ದಾರೆ: ಇಲ್ಲಿಗೆ ಬಂದಿರುವ ಮಂತ್ರಿಗಳು ಎಲ್ಲರೂ ನನ್ನ ಬಳಿ ಅನುದಾನಕ್ಕೆ ಕೈಚಾಚಿದವರು, ಯಾರೂ ತೀಸ್ ಮಾರ್ ಖಾನ್‌ಗಳಿಲ್ಲ. ನನ್ನ ವಿರುದ್ಧ ರಾವಣರ ಸೇನೆ ಬಂದಿದೆ. ಆದರೆ, ರಾವಣನ ಲಂಕೆಗೆ ಹನುಮಂತನ ಸೇನೆ ನುಗ್ಗಿ ಸುಟ್ಟುಹಾಕಿತು. ಯಾರೇ ಬಂದರೂ ನಾನು ಹೆದರುವುದಿಲ್ಲ.
ಈ ಚುನಾವಣೆ ಕಾಂಗ್ರೆಸ್ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ನಡುವಿನ ಹೋರಾಟವಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಮ್ಮ ಕ್ಷೇತ್ರಕ್ಕೆ ಒಂದು ರುಪಾಯಿ ಯೋಜನೆ ಕೊಟ್ಟಿಲ್ಲ. ನಾನು ಸಿಎಂ ಇದ್ದಾಗ ₹300 ಕೋಟಿ ಮಂಜೂರು ಮಾಡಿದ್ದೆ, ಅದನ್ನು ವಾಪಸ್ ಪಡೆದಿದ್ದಾರೆ. ಮಸೀದಿ, ದರ್ಗಾ ನಿರ್ಮಿಸಲು ಹತ್ತು ಕೊಟಿ ಬಿಡುಗಡೆ ಮಾಡಿದ್ದನ್ನು ವಾಪಸ್ ಪಡೆದಿದ್ದಾರೆ. ಮುಸಲ್ಮಾನ್ ಬಾಂಧವರು ಜಮೀರ್ ಅಹಮದ್ ಅವರನ್ನು ಬೆನ್ನು ಹತ್ತಿದರೆ ನಿಮಗೆ ಚಿಪ್ಪು ಕೊಡುತ್ತಾನೆ. ಎಚ್ಚರಿಕೆಯಿಂದ ಮತ ಹಾಕಿ ಎಂದರು.