ಸಿದ್ಧಾರೂಢ ಜ್ಯೋತಿ ಯಾತ್ರೆಗೆ ಭಕ್ತಿಯ ಸ್ವಾಗತ

| Published : Jan 16 2025, 12:50 AM IST

ಸಾರಾಂಶ

ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಯನ್ನು ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಸಿದ್ಧಾರೂಢ ಭಕ್ತಿ ಮಂಡಳಿಯವರು ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಿದರು.

ಹಿರೇಕೆರೂರು: ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಯನ್ನು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಸಿದ್ಧಾರೂಢ ಭಕ್ತಿ ಮಂಡಳಿಯವರು ಶ್ರದ್ಧಾ-ಭಕ್ತಿಯಿಂದ ಸ್ವಾಗತಿಸಿದರು.

ಶ್ರೀ ಸಿದ್ಧಾರೂಢ ಸ್ವಾಮಿಗಳ 190ನೇ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತಿ ಮತ್ತು ಶ್ರೀ ಸಿದ್ಧಾರೂಢರ ಕಥಾಮೃತ ಶತಮಾನೋತ್ಸವದ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆಯು ಹಿರೇಕೆರೂರು ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಆಗಮಿಸುತ್ತಿದ್ದಂತೆ ಭಕ್ತರು ಹೂವಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಯಿಂದ ಬರಮಾಡಿಕೊಂಡರು.

ಪಟ್ಟಣದ ಸರ್ವಜ್ಞ ವೃತ್ತದಿಂದ ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆ ಪಾಲಕಿ ಉತ್ಸವದೊಂದಿಗೆ ಮೆರವಣಿಗೆ ಆರಂಭಿಸಲಾಯಿತು. ಮಾತೆಯರ ಪೂರ್ಣಕುಂಭ, ಸಾಂಸ್ಕೃತಿಕ, ಕಲಾ ತಂಡ ವಾದ್ಯ ಹಾಗೂ ಶ್ರೀ ಸಿದ್ಧಾರೂಢರ ಕಥಾಮೃತದೊಂದಿಗೆ ಭವ್ಯ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಚಾವಡಿ ವೃತ್ತದಲ್ಲಿನ ಕೋಟೆ ಆಂಜನೇಯ ದೇವಸ್ಥಾನ ತಲುಪಿತು. ಆನಂತರ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಶ್ರೀ ಸಿದ್ಧಾರೂಢ ಭಕ್ತಿ ಮಂಡಳಿಯವರು ಪಾಲ್ಗೊಂಡಿದ್ದರು.

ಭಕ್ತಿಭಾವದಿಂದ ನೆರವೇರಿದ ಬನಶಂಕರಿ ರಥೋತ್ಸವ:ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ಭಕ್ತಿ-ಭಾವದಿಂದ ನೆರವೇರಿತು. ರಥೋತ್ಸವದ ನಿಮಿತ್ತ ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ, ದೇವಿಯ ಮೂರ್ತಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.

ಹೂವಿನ ಹಾರ ಮತ್ತು ನಿಶಾನೆಗಳಿಂದ ಅಲಂಕರಿಸಿದ ರಥಕ್ಕೆ ದೇವಸ್ಥಾನದ ಎದುರು ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗುಗ್ಗಳದೊಂದಿಗೆ ದೇವಸ್ಥಾನದಿಂದ ಬಸ್ ನಿಲ್ದಾಣದ ವರೆಗೆ ಎಳೆದು ನಂತರ ಪುನಃ ದೇವಸ್ಥಾನದ ವರೆಗೆ ರಥವನ್ನು ಭಕ್ತರ ಜಯಘೋಷಗಳೊಂದಿಗೆ ಎಳೆಯಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು.