ಅಂತರ್ಜಲ ಹಾಗೂ ಜಲಚರಗಳಿಗೆ ಗಂಭೀರವಾಗಿ ಹಾನಿ ಮಾಡುವ ರಾಸಾಯನಿಕಯುಕ್ತ ಪಿಒಪಿ ( ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ಕಡಿವಾಣಕ್ಕೆ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹಲವು ವರ್ಷಗಳ ಶ್ರಮಕ್ಕೆ ಈ ಬಾರಿ ಪ್ರತಿಫಲ ಲಭಿಸಿದೆ.
ನಾಗರಾಜ ಮಾರೇರ
ಹುಬ್ಬಳ್ಳಿ:ಅಂತರ್ಜಲ ಹಾಗೂ ಜಲಚರಗಳಿಗೆ ಗಂಭೀರವಾಗಿ ಹಾನಿ ಮಾಡುವ ರಾಸಾಯನಿಕಯುಕ್ತ ಪಿಒಪಿ ( ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ಕಡಿವಾಣಕ್ಕೆ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹಲವು ವರ್ಷಗಳ ಶ್ರಮಕ್ಕೆ ಈ ಬಾರಿ ಪ್ರತಿಫಲ ಲಭಿಸಿದೆ. ಹೀಗಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಭಕ್ತರು ಜೈಕಾರ ಹಾಕಿದ್ದಾರೆ.
ಪ್ರತಿ ವರ್ಷವೂ ಗಣೇಶೋತ್ಸವದ ಎರಡ್ಮೂರು ತಿಂಗಳು ಮೊದಲೇ ಮಹಾರಾಷ್ಟ್ರ, ಪುಣೆ, ಸೋಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಿಡಿಒ ಗಣೇಶ ಮೂರ್ತಿಗಳು ಮಹಾನಗರ ಪ್ರವೇಶಿಸುತ್ತಿದ್ದೇವು. ಜಿಲ್ಲಾಡಳಿತ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿದರೂ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಪಿಡಿಒ ಮೂರ್ತಿಗಳು ನಗರಕ್ಕೆ ಲಗ್ಗೆ ಇಡುತ್ತಿದ್ದವು.ಕೊನೆಗೆ ದೊರೆತ ಪ್ರತಿಫಲ:
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರ, ಜಲಚರ ಪ್ರಾಣಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜನರಿಗೆ ಜಾಗೃತಿ ಜಾಥಾ, ಅರಿವು ಹಾಗೂ ಪರಿಸರ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ಆಗುವ ಲಾಭಗಳ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ ಎಂಬುದೇ ಸಮಾಧಾನದ ಸಂಗತಿ.₹ 1 ಲಕ್ಷ ದಂಡದ ಎಚ್ಚರಿಕೆ:
ಜಿಲ್ಲೆಯಲ್ಲಿ ಪಿಡಿಒ ಗಣೇಶ ಮೂರ್ತಿಗಳ ಮಾರಾಟ, ಸಾಗಾಟ, ಪ್ರತಿಷ್ಠಾಪನೆ ಕಂಡುಬಂದರೆ ₹ 1 ಲಕ್ಷ ದಂಡ ವಿಧಿಸುವ ಜತೆಗೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಸಿದ್ದರು. ಜತೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಾಕೀತು ಮಾಡಿದ್ದರು.ಅಧಿಕಾರಿಗಳಿಂದ ತಲಾಶ್:
ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಾರಿ ಗಣೇಶ ಮೂರ್ತಿಗಳ ತಯಾರಕರ ಮನೆ, ಮಾರಾಟದ ಅಂಗಡಿ ಸೇರಿದಂತೆ ತಮಗೆ ಅನುಮಾನ ಬಂದ ಸ್ಥಳಗಳನ್ನು ನಿರಂತರವಾಗಿ ತಲಾಶ್ ಮಾಡಿದ್ದಾರೆ. ಶನಿವಾರವೂ ಅಧಿಕಾರಿಗಳು ತಪಾಸಣೆ ನಡೆಸಿದ್ದು ಭಾನುವಾರ ಹಾಗೂ ಸೋಮವಾರವೂ ನಿರಂತರ ನಿಗಾ ಇಡಲಾಗುವುದು ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.ಮಣ್ಣಿನ ಮೂರ್ತಿಗೆ ಡಿಮ್ಯಾಂಡ್:
ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದ ಪರಿಣಾಮ ಮಣ್ಣಿನ ಮೂರ್ತಿಗಳಿಗೆ ಈ ಬಾರಿ ಬೇಡಿಕೆ ಬಂದಿದೆ. 1ರಿಂದ 2 ಅಡಿ ಗಣಪತಿ ₹ 1500 ₹ 2000, 2ರಿಂದ 3 ಅಡಿ ಗಣಪತಿ ₹ 2000ಕ್ಕೂ ಅಧಿಕ ಬೆಲೆ ಮಾರಾಟವಾಗುತ್ತಿವೆ. ಎತ್ತರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ನಮ್ಮ ಪೂರ್ವಜರ ಕಾಲದಿಂದಲೂ ಗಣೇಶ ಮೂರ್ತಿಗಳನ್ನು ಮಾಡುತ್ತಾ ಬಂದಿದ್ದೇವೆ. ಆದರೆ, ಪಿಒಪಿ ಗಣೇಶ ಮೂರ್ತಿಗಳ ಆಗಮನದಿಂದ ನಮ್ಮ ವೃತ್ತಿಗೆ ಪೆಟ್ಟು ಬಿದ್ದಿತ್ತು. ಆದರೆ, ಈ ಬಾರಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಬಂದಿದೆ ಎನ್ನುತ್ತಾರೆ ಮೂರ್ತಿ ತಯಾರಕರಾದ ನೀಲಕಂಠ ಬಡಿಗೇರ.₹ 25000 ಪ್ರೋತ್ಸಾಹ ಧನ:
ಮಣ್ಣಿನ ಗಣೇಶ ಮೂರ್ತಿ ತಯಾರಿಕರಿಗೆ ಈ ವರ್ಷದಿಂದ ₹ 25000 ಪ್ರೋತ್ಸಾಹ ಧನ ನೀಡುವ ಜತೆಗೆ ಧೀಮಂತ ಸನ್ಮಾನ ಹಾಗೂ ಮನೆಯಲ್ಲಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿರುವ ಜನರು ಪಾಲಿಕೆ ಫೋಟೋ ಕಳಿಸಿದರೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಘೋಷಿಸಿರುವುದು ಸಹ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಕಡಿವಾಣ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಿಒಪಿ ಗಣೇಶ ಮೂರ್ತಿಗಳ ಹಾವಳಿಯಿಂದ ನಮ್ಮ ಪೂರ್ವಜರ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ತಗ್ಗಿತ್ತು. ಕಳೆದ ಎರಡ್ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು ನಮ್ಮ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದೆ. ಮುಂದಿನ ವರ್ಷ ಮತ್ತಷ್ಟು ಮೂರ್ತಿಗಳನ್ನು ತಯಾರಿಸಲು ಶಕ್ತಿ ನೀಡಿದೆ.ಮಾರ್ತಾಂಡಪ್ಪ ಕಮ್ಮಾರ, ಮೂರ್ತಿ ತಯಾರಕರು
ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸಿದ ಪರಿಣಾಮ ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆಗೆ ಭಕ್ತರು ಮುಂದಾಗಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಪ್ರತಿ ವರ್ಷವೂ ನಮ್ಮ ಅಭಿಯಾನ ನಿರಂತರವಾಗಿ ನಡೆಯಲಿದೆ.
ಡಾ. ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಆಯುಕ್ತ