ಐತಿಹಾಸಿಕ ಕಾರ್ಯಕ್ರಮ ಮಾಡಲು ಭಕ್ತರ ನಿರ್ಧಾರ

| Published : Oct 06 2024, 01:28 AM IST

ಸಾರಾಂಶ

ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದ ಅಡವಿಸಿದ್ಧೇಶ್ವರ ಮಠದ ದ್ವಿಶತಮಾನೋತ್ಸವ, ಸಾಂಸ್ಕೃತಿಕ ಭವನದ ಲೋಕಾರ್ಪಣೆ, ಡಾ.ನಿರುಪಾಧಿ ಮಹಾಸ್ವಾಮಿಗಳ ಸಹಸ್ರ ಚಂದ್ರದರ್ಶನ ಮತ್ತು ಗ್ರಂಥಗಳ ತುಲಾಭಾರ ಹಾಗೂ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಕುರಿತು ಮರೇಗುದ್ದಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಮರೇಗುದ್ದಿ ಗ್ರಾಮದ ಅಡವಿಸಿದ್ಧೇಶ್ವರ ಮಠದ ದ್ವಿಶತಮಾನೋತ್ಸವ, ಸಾಂಸ್ಕೃತಿಕ ಭವನದ ಲೋಕಾರ್ಪಣೆ, ಡಾ.ನಿರುಪಾಧಿ ಮಹಾಸ್ವಾಮಿಗಳ ಸಹಸ್ರ ಚಂದ್ರದರ್ಶನ ಮತ್ತು ಗ್ರಂಥಗಳ ತುಲಾಭಾರ ಹಾಗೂ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವದ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಕುರಿತು ಮರೇಗುದ್ದಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸ್ವಾಮಿಗಳ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಭಕ್ತರು ದ್ವಿಶತಮಾನ ಗಳಿಂದ ಅಡವಿಸಿದ್ದೇಶ್ವರ ಮಠವು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಿತ್ಯದಾಸೋಹ, ಶಿಕ್ಷಣ ಸಂಸ್ಥಳು ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿದೆ.

ಮಠದ ಮೂಲ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಕಾಪಾಡುತ್ತ ಭಕ್ತರ ಮನದಲ್ಲಿ ಶ್ರೀಮಠವು ನೆಲೆಸಿದೆ. ಜಾತಿ, ಧರ್ಮ, ಮತ, ಪಂಥಗಳೆನ್ನದೆ ಭಾವೈಕ್ಯತೆಯ ನೆಲೆಗಟ್ಟಿನಲ್ಲಿ ಮುಂದುವರೆದಿರುವ ರಾಜ್ಯದ ಬೆರಳೆಣಿಕೆಯ ಮಠಗಳಲ್ಲಿ ಇದು ಒಂದಾಗಿದೆ. ಅಡವಿಸಿದ್ಧೇಶ್ವರ ಆಶಿರ್ವಾದದಿಂದ ಭಕ್ತರ ಉದ್ಧಾರವಾಗಿದೆ. ಮಠದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತನು-ಮನ-ಧನದಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.

ಗುರುಪಾದ ಮಹಾಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಠದ ಭಕ್ತರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮವು ಕರ್ನಾಟಕದಲ್ಲಿಯೇ ಅಭೂತಪೂರ್ವ ಕಾರ್ಯಕ್ರಮವಾಗುವುದರಿಂದ ಪ್ರತಿಯೊಬ್ಬ ಭಕ್ತರ ತ್ಯಾಗಮನೋಭಾವನೆಯು ಬಹಳ ಮುಖ್ಯವಾಗಿದೆ. ಶ್ರೀಮಠವು ಹಿಂದಿನಂತೆ ಮುಂದೆಯು ಭಕ್ತರ ಮತ್ತು ಸಮಾಜದ ಒಳಿತಿಗಾಗಿ ತಮ್ಮೆಲ್ಲರ ಸಲಹೆ-ಸೂಚನೆಗಳಂತೆ ಕಾರ್ಯನಿರ್ವಹಿಸುತ್ತದೆ. ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಲ್ಲಿರುವ ಹೆಸರಾಂತ ಮಠಾಧೀಶರು ಮತ್ತು ರಾಜ್ಯದ ಮೂಲೆಮೂಲೆಗಳಿಂದ ಜನರು ಆಗಮಿಸಲಿದ್ದಾರೆ. ಇವರೆಲ್ಲರ ಸ್ವಾಗತ, ಬೀಳ್ಕೊಡುಗೆ ಮತ್ತು ಆದರಾತಿಥ್ಯವು ಭಕ್ತರ ಜವಾಬ್ದಾರಿಯಾಗಿದೆ ಎಂದರು.

ಸ್ವಾಗತ, ಪ್ರಸಾದ, ಹಣಕಾಸು, ಪ್ರಚಾರ ಮತ್ತು ವೇದಿಕೆ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಗಳು 2025 ಜನವರಿಯ 6.7.8 ಮತ್ತು 9 ರಂದು ನಡೆಯಲಿದ್ದು, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದು ಭಕ್ತರೆಲ್ಲರು ನಿರ್ಣಯಿಸಿದರು.

ಸಭೆಯಲ್ಲಿ ಜಮಖಂಡಿ, ಮುಧೋಳ, ಬೀಳಗಿ, ಬಾಗಲಕೋಟೆ, ರಾಮದುರ್ಗ, ಬನಹಟ್ಟಿ-ರಬಕವಿ, ಮೂಡಲಗಿ, ಗೋಕಾಕ, ಬಬಲೇಶ್ವರ, ಬಸವನ ಬಾಗೇವಾಡಿ, ಕೊಲ್ಹಾರ ತಾಲೂಕಿನ ಹಲವು ಗ್ರಾಮಗಳ ಭಕ್ತ ಸಮೂಹವು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಬಸವರಾಜ ಗಿರಗಾಂವಿ ನಿರೂಪಿಸಿದರು. ಶ್ರೀಶೈಲ ನಂದೆಪ್ಪನವರ ಸ್ವಾಗತಿಸಿದರು. ರಾಜಕುಮಾರ ಪಾಟೀಲ ವಂದಿಸಿದರು.