ಸಾರಾಂಶ
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆ ಅಡ್ಡಿಯಿದ್ದರೂ ಜನರಲ್ಲಿ ಕುಂದದ ಉತ್ಸಾಹ । ಮಾಹೇಶ್ವರಿಯಾಗಿ ಕಂಗೊಳಿಸಿದ ಶಾರದೆ
ಕನ್ನಡಪ್ರಭ ವಾರ್ತೆ, ಶೃಂಗೇರಿಶೃಂಗೇರಿಯಲ್ಲಿನ ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರಗು ಪಡೆದುಕೊಳ್ಳುತ್ತಿದ್ದು ಭಕ್ತರ ದಂಡೇ ಶೃಂಗೇರಿಗೆ ಹರಿದು ಬರುತ್ತಿದೆ. ಒಂದೆಡೆ ಗುಡುಗು ಮಳೆಯ ಆರ್ಭಟ, ಇನ್ನೊಂದೆಡೆ ಜನಸಾಗರ. ಶ್ರೀಮಠದ ಆವರಣ, ಗಾಂಧಿ ಮೈದಾನ, ಶಾರದಾಂಬಾ ದೇವಾಲಯ, ನರಸಿಂಹವನ , ಭೋಜನಾ ಶಾಲೆ, ಬಸ್ ನಿಲ್ದಾಣ, ಭಾರತೀ ಬೀದಿ ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿದೆ.
ಪ್ರತಿ ದಿನ ಮಳೆ ಅಢ್ಡಿಪಡಿಸುತ್ತಿದ್ದರೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಯುತವಾಗಿ ನಡೆಯುತ್ತಿವೆ. ಮಳೆಯನ್ನು ಲೆಕ್ಕಿಸದೇ ಭಕ್ತರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತಿದ್ದಾರೆ. ಪೀಠದ ಅಧಿದೇವತೆ ಶಾರದೆಗೆ ಮಹಾಭಿಷೇಕದ ನಂತರ ಜಗತ್ ಪ್ರಸೂತಿಕಾ ಅಲಂಕಾರ, ಹಂಸವಾಹಿನಿ, ಬ್ರಾಹ್ಮಿ ಅಲಂಕಾರದ ನಂತರ ಶನಿವಾರ ಮಾಹೇಶ್ವರಿ ಅಲಂಕಾರ ಮಾಡಲಾಗಿತ್ತು. ಆದಿಶಕ್ತಿ ಪಾರ್ವತಿ ಈಶ್ವರನ ಅರ್ಧಾಂಗಿನಿ ಯಾಗಿ ಕೈಯಲ್ಲಿ ತ್ರಿಶೂಲ ಧರಿಸಿ ಚಂದ್ರಲೇಖ ವಿಭೂಷಿತಳಾಗಿ ವೃಷಭವಾಹನರೂಢಳಾಗಿ ಮಾಹೇಶ್ವರಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿ ಸುತ್ತಿರುವ ದೃಶ್ಯ ನಯನ ಮನೋಹರವಾಗಿತ್ತು.ಶಾರದೆಗೆ ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಸಂಜೆ ಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥ ರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಜಾನಪದ, ಸಾಂಸ್ಕೃತಿಕ ತಂಡಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸುತ್ತಮುತ್ತಲ ತಾಲೂಕುಗಳ ಭಕ್ತಾದಿಗಳು ಪಾಲ್ಗೊಂಡಿದ್ದರು. ಶ್ರೀ ಮಠದ ಚಂದ್ರಶೇಖರ ಭಾರತೀ ಸಭಾಂಗಣದ ಸಾಂಸ್ಕೃತಿಕ ಮಹೋತ್ಸವದಲ್ಲಿ ರಾಮನಾಥ ಭಾಗವತ್ ತಂಡದವರಿಂದ ಹಾಡುಗಾರಿಕೆ ನಡೆಯಿತು.
ಭಾನುವಾರ ಶಾರದೆಗೆ ಕೌಮಾರಿ ಅಲಂಕಾರ ನಡೆಯಲಿದ್ದು, ಸಂಜೆ ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಸಿಕ್ಕಿಲ್ ಮಾಲಾ ಚಂದ್ರಶೇಖರ್ ತಂಡದಿಂದ ಕೊಳಲು ವಾದನ ನಡೆಯಲಿದೆ.5 ಶ್ರೀ ಚಿತ್ರ 1-
ಶೃಂಗೇರಿ ಶಾರದಾ ಪೀಠದಲ್ಲಿ ನವರಾತ್ರಿ ಅಂಗವಾಗಿ ಶನಿವಾರ ಮಾಹೇಶ್ವರಿ ಅಲಂಕಾರ ಮಾಡಲಾಗಿತ್ತು.5 ಶ್ರೀ ಚಿತ್ರ 2-
ಶೃಂಗೇರಿಯಲ್ಲಿ ಸುರಿದ ಮಳೆಯ ನಡುವೆಯು ಪ್ರವಾಸಿಗರು ನೂಕು ನುಗ್ಗಲು ಕಂಡು ಬಂದಿತು.