ಸದ್ಭಾವನಾ ಪಾದಯಾತ್ರೆಯ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ

| Published : Dec 01 2024, 01:34 AM IST

ಸದ್ಭಾವನಾ ಪಾದಯಾತ್ರೆಯ ಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ
Share this Article
  • FB
  • TW
  • Linkdin
  • Email

ಸಾರಾಂಶ

ನಸುಕಿನ ಜಾವವೇ ಎದ್ದು ಮನೆ ಮುಂದೆ ರಂಗೋಲಿ ಬಡಿಸಿ, ಹೂ ಎರಚಿ, ಶ್ರೀಗಳ ಬರುವಿಕೆಗಾಗಿ ಆರತಿ ಹಿಡಿದು ರಸ್ತೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸುತ್ತಿದ್ದಾರೆ

ಗಜೇಂದ್ರಗಡ: ನಸುಕಿನ ಜಾವ ಮೈ ಕೊರೆಯುವ ಚಳಿ, ಎದ್ದೇಳೆಲು ಒಪ್ಪದ ಮನಸ್ಸು. ಆದರೆ ಶ್ರೀಗಳು ಬಡಾವಣೆಗೆ ಬರುತ್ತಿದ್ದಾರೆ ಎಂಬ ಸುದ್ದಿಯು ವಾರ್ಡ್‌ನ ಜನತೆಯ ಮೈಗೆರಗುವ ಚಳಿಯೂ ಮಾರೂದ್ದ ಓಡಿದೆ ಎಂಬಂತೆ ಮಕ್ಕಳಿಂದ ಹಿಡಿದು ನೂರಾರು ಭಕ್ತರು ಮನೆ ಮುಂದೆ ರಂಗೋಲಿ, ಹೂ ಹಾಸಿಗೆ ಹಾಸಿ ಶ್ರೀಗಳೊಂದಿಗೆ ಹೆಜ್ಜೆ ಹಾಕಿದ ಸಾರ್ಥಕತೆ ಭಾವ ಭಕ್ತರಲ್ಲಿ ಕಾಣುತ್ತಿದೆ.

ಸ್ಥಳೀಯ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆಯುತ್ತಿರುವ ಬಸವ ಪುರಾಣ ನಿಮಿತ್ತ ಹಾಲಕೆರೆ ಸಂಸ್ಥಾನಮಠದ ಪೀಠಾಧ್ಯಕ್ಷ ಮುಪ್ಪಿನ ಬಸವಲಿಂಗ ಶ್ರೀಗಳು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಸದ್ಭಾವನಾ ಪಾದಾಯಾತ್ರೆಯ ಶನಿವಾರ ಇಲ್ಲಿನ ಸೇವಾಲಾಲ್ ಬಡಾವಣೆ ಹಾಗೂ ಗೌಳಿಗಲ್ಲಿ ವಾರ್ಡ್‌ನ ಜನತೆ ಶ್ರೀಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣವು ಸಮುದಾಯಗಳಲ್ಲಿ ಶಾಂತಿ ಮತ್ತು ಸೌಹಾರ್ದತೆ ಗಟ್ಟಿಗೊಳಿಸಲು ಹಾಗೂ ಸಮಾಜದಲ್ಲಿ ಸಮನ್ವಯ ನಿಮಿತ್ತ ನಡೆಯುತ್ತಿರುವ ಸದ್ಭಾವನಾ ಪಾದಯಾತ್ರೆ ಸಂಚರಿಸುವ ಮಾರ್ಗಗಳಲ್ಲಿ ಬಡಾವಣೆಯ ನಿವಾಸಿಗಳು ನಸುಕಿನ ಜಾವವೇ ಎದ್ದು ಮನೆ ಮುಂದೆ ರಂಗೋಲಿ ಬಡಿಸಿ, ಹೂ ಎರಚಿ, ಶ್ರೀಗಳ ಬರುವಿಕೆಗಾಗಿ ಆರತಿ ಹಿಡಿದು ರಸ್ತೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸುತ್ತಿದ್ದಾರೆ.

ಪಟ್ಟಣದಲ್ಲಿ ಅಂಬೇಡ್ಕರ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರಿಗೆ ಪುಷ್ಪನಮನ ಸಲ್ಲಿಸಿ ಆರಂಭವಾದ ಮೆರವಣಿಗೆಯು ಸೇವಾಲಾಲ್ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಗೌಳಿಗಲ್ಲಿಯ ಗರಡಿಮನೆಗೆ ಆಗಮಿಸಿದಾಗ ವಾರ್ಡ್‌ನ ಜನತೆ ಶ್ರೀಗಳನ್ನು ಭಕ್ತಿ ಪೂರ್ವಕ ನಮನ ಸಲ್ಲಿಸುವ ಮೂಲಕ ಬರಮಾಡಿಕೊಂಡಿರು.

ನಂತರ ವಾರ್ಡ್‌ನಲ್ಲಿ ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಚನ್ನಬಸವ ಸ್ವಾಮೀಜಿ, ದರೂರು ಸಂಗನಬಸವೇಶ್ವರ ಮಠದ ಕೊಟ್ಟರು ಸ್ವಾಮೀಜಿ, ಹೊಸುರು-ಜಿಗೇರಿಯ ಗುರು ಸಿದ್ಧೇಶ್ವರ ಶಿವಾಚಾರ್ಯ, ಗರಗನಾಗಲಾಪೂರ ಒಪ್ಪತೇಶ್ವರ ಸಂಸ್ಥಾನಮಠದ ನಿರಂಜನ ಪ್ರಭು ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟರು ದೇಶಿಕರು, ಸಂಗನಾಳ ವಿಶ್ವೇಶ್ವರ ದೇವರು, ಗುಡೂರಿನ ಆನಂದ ಶಾಸ್ತ್ರಿ ಅವರೊಂದಿಗೆ ಭಕ್ತ ಸಮೂಹವು ಜೈಕಾರ ಘೋಷಣೆ ಕೂಗುತ್ತಾ ಸಾಗಿದರು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಕೌಸರಬಾನು ಹುನಗುಂದ, ಎಚ್.ಎಸ್. ಸೋಂಪುರ, ತಿಪ್ಪಣ್ಣ ಪಲ್ಲೇದ, ಯಲ್ಲಪ್ಪ ಕದಡಿ, ಬಸವರಾಜ ವದೆಗೋಳ, ವಿನಾಯಕ ರಾಜಪುರೋಹಿತ, ಎ.ಡಿ. ಕೋಲಕಾರ, ಉದಯಸಿಂಗ್ ರಜಪೂತ, ನಿಂಗಪ್ಪ ಮಾಸ್ತಿ, ಮರ್ದಾನಸಾಬ್‌ ಹುನಗುಂದ, ರೇಣಪ್ಪ ಹರಪನಹಳ್ಳಿ, ಸುರೇಶ ಚಿತ್ರಗಾರ, ಮುತ್ತಣ್ಣ ಚಟ್ಟೇರ, ಸೇರಿದಂತೆ ಇತರರು ಇದ್ದರು.