ಸಾರಾಂಶ
ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಸಾಮಾನ್ಯವಾಗಿ ಮಳೆಗಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಸಮಸ್ಯೆ ಕಾಡುವುದು ಸಹಜ, ಆದರೆ ಸಹಸ್ರಾರು ಭಕ್ತರನ್ನು ಹೊಂದಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದಲ್ಲಿ ಒಂದೇ ಮಳೆಗೆ ಇಡೀ ಗ್ರಾಮ ಕೊಳೆಯಾಗುತ್ತಿದ್ದು ಇಲ್ಲಿಗೆ ಬರುವ ದತ್ತನ ಭಕ್ತರು ಗ್ರಾಮದಲ್ಲಿನ ಸಮಸ್ಯೆಗಳು ಕಂಡು ಪರದಾಡುವಂತಾಗುತ್ತಿದೆ.
ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ ಸೇರಿದಂತೆ ರಾಜ್ಯದ, ದೇಶದ ಮೂಲೆ ಮೂಲೆಗಳಿಂದ ಹುಣ್ಣಿಮೆ, ಅಮಾವಾಸ್ಯೆ, ಗುರು ಪೂರ್ಣಿಮೆ ಸೇರಿ ವಿಶೇಷ ದಿನಗಳಂದು ಸಹಸ್ರಾರು ಸಂಖ್ಯೆಯ ಭಕ್ತರು ಬಂದು ದತ್ತಾತ್ರೇಯ ಮಹಾರಾಜರ ದರ್ಶನ ಪಡೆದುಕೊಳ್ಳುತ್ತಾರೆ, ಭೀಮಾ ಅಮರ್ಜಾ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಹರಕೆಗಳನ್ನು ತೀರಿಸುತ್ತಾರೆ. ಆದರೆ ರಾಜ್ಯದ ಇತರ ಮುಜರಾಯಿ ಇಲಾಖೆ ದೇವಸ್ಥಾನಗಳಿರುವ ಕ್ಷೇತ್ರಗಳಿಗೆ ಹೋಲಿಸಿದರೆ ಗಾಣಗಾಪೂರ ಸುಕ್ಷೇತ್ರ ನೈರ್ಮಲ್ಯದ ದೃಷ್ಟಿಯಿಂದ ಬಹಳಷ್ಟು ಹಿಂದುಳಿದಿದ್ದು ಇಲ್ಲಿಗೆ ಬರುವ ಭಕ್ತರು ಇಲಾಖೆ ಮತ್ತು ಸ್ಥಳೀಯ ಆಡಳಿತದ ಮೇಲೆ ಹಿಡಿ ಶಾಪ ಹಾಕುವಂತಾಗಿದೆ.ಎಲ್ಲಿ ನೋಡಿದರು ಕಸದ ರಾಶಿ, ಕೆಸರು ರಾಡಿ: ಗಾಣಗಾಪೂರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಬಿದ್ದಿದ್ದು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಈಗ ಮಳೆ ಬರುತ್ತಿದ್ದು ಪ್ಲಾಸ್ಟಿಕ್ ತ್ಯಾಜ್ಯ, ತೆಂಗಿನ ಸಿಪ್ಪೆ, ಬಟ್ಟೆ, ಪ್ಲಾಸ್ಟಿಕ್ ಬಾಟಲಿಗಳು ಸೇರಿ ಅನೇಕ ವಸ್ತುಗಳು ರಸ್ತೆಗಳ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅವುಗಳ ಮೇಲೆಲ್ಲಾ ವಾಹನಗಳು ಓಡಾಡಿ ಇನ್ನಷ್ಟು ಗಲೀಜು ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಮುಖ್ಯ ರಸ್ತೆಗಳಿಗೆ ಸುಸಜ್ಜಿತ ಒಳ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೆ ಮುಖ್ಯ ರಸ್ತೆಗಳ ಮೇಲೆ ನಿಂತು ವಾತಾವರಣ ಕಲುಷಿತಗೊಳಿಸುವಂತಾಗಿದೆ. ನಿಂತಲ್ಲೇ ನೀರು ನಿಂತು ದುರ್ನಾತ ಬೀರುತ್ತಿದೆ. ಇಂತಹ ಕೆಸರುಗದ್ದೆಯಂತಾಗಿರುವ ರಸ್ತೆಗಳಲ್ಲೇ ಸಾವಿರಾರು ಸಂಖ್ಯೆಯ ಭಕ್ತರು ನಡೆದುಕೊಂಡು ಹೋಗಿ ದರ್ಶನ ಪಡೆದುಕೊಳ್ಳುವಂತಾಗಿದೆ.
ಪಾರ್ಕಿಂಗ್ ಅವ್ಯವಸ್ಥೆ: ಜು.21ರಂದು ಗುರು ಪೂರ್ಣಿಮೆ ಇರುವ ಕಾರಣದಿಂದ ರಾಜ್ಯ-ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ತಮ್ಮ ವಾಹನಗಳನ್ನು ತೆಗೆದುಕೊಂಡು ಗಾಣಗಾಪೂರಕ್ಕೆ ಆಗಮಿಸಿದ್ದರಿಂದ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆಯಾಗುವಂತಾಯಿತು. ಮಳೆ ಬಂದು ಎಲ್ಲಾ ಹೊಲಗದ್ದೆಗಳು ಕೆಸರುಮಯವಾಗಿದ್ದರಿಂದ ಚವಡಾಪುರ ಮಾರ್ಗ ಮತ್ತು ಅಫಜಲಪುರ, ಆನೂರ ತೆಲ್ಲೂರ ಮಾರ್ಗದಲ್ಲಿ ಮುಖ್ಯ ರಸ್ತೆಯ ಮೇಲೆ 2 ರಿಂದ 3 ಕಿ.ಮೀ ದೂರದ ವರೆಗೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಭಕ್ತರು ಮತ್ತು ಸಾರ್ವಜನಿಕರು ನಡೆದುಕೊಂಡು ಗಾಣಗಾಪೂರ ತಲುಪುವಂತಾಯಿತು. ಕೆಲವರು ಹರಸಾಹಸ ಪಟ್ಟು ತಮ್ಮ ವಾಹನಗಳಲ್ಲೇ ಗಾಣಗಾಪೂರ ಸೇರುವ ಪ್ರಯತ್ನವು ಮಾಡಿದ್ದು ಕಂಡು ಬಂತು. ಇವುಗಳ ಮಧ್ಯ ಪೊಲೀಸ್ ಇಲಾಖೆಯವರು ವಾಹನ ದಟ್ಟಣೆ ತಡೆಯಲು ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹರಸಾಹಸ ಪಡುವಂತಾಯಿತು.ಪಿಎಸ್‌ಐ ರಾಹುಲ್ ಪವಾಡೆ ಹಾಗೂ ಸಿಬ್ಬಂದಿಗಳು ಬಸ್ ನಿಲ್ದಾಣ ಮತ್ತು ದೇವಸ್ಥಾನದ ಪ್ರದೇಶದಲ್ಲಿ ವಾಹನ ದಟ್ಟಣೆ ಆಗದಂತೆ ನಿಯಂತ್ರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮಹಿಳಾ ಭಕ್ತರಿಗೆ ಶೌಚಾಲಯ ಸಮಸ್ಯೆ: ಸಾವಿರಾರು ಸಂಖ್ಯೆಯಲ್ಲಿ ಬರುವ ದತ್ತನ ಭಕ್ತರಲ್ಲಿ ಮಹಿಳಾ ಭಕ್ತರಿಗೆ ಇಲ್ಲಿ ಮುಖ್ಯವಾಗಿ ಕಾಡುತ್ತಿರುವುದು ಶೌಚಾಲಯದ ಸಮಸ್ಯೆ. ಗ್ರಾಮದ ಬಸ್ ನಿಲ್ದಾಣ, ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಉಪಯೋಗಕ್ಕೆ ಬಾರದಂತಾಗಿರುವ ಶೌಚಾಲಯಗಳಿದ್ದು ಅವುಗಳನ್ನು ಬಳಸಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಬಂದಿದೆ. ಹೀಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಶೌಚಾಲಯ, ಮೂತ್ರಾಲಯಗಳ ನಿರ್ಮಾಣವಾಗಬೇಕು ಎಂದು ಮಹಿಳಾ ಭಕ್ತರು ಬೇಡಿಕೆ ಇಡುವಂತಾಗಿದೆ.ಸಾಂಕ್ರಾಮಿಕ ರೋಗ ಭೀತಿಯಲ್ಲಿ ದತ್ತನ ಭಕ್ತರು: ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಬರುವುದರಿಂದ ಸಾಕಷ್ಟು ಜನದಟ್ಟಣೆ ಆಗುತ್ತಿದೆ. ಆದರೆ ಗಾಣಗಾಪೂರದಲ್ಲಿನ ನೈರ್ಮಲ್ಯ ಸಮಸ್ಯೆ, ಕಸದ ರಾಶಿ, ಚರಂಡಿ ಮಳೆ ನೀರಿನಿಂದ ಬರುವ ದುರ್ನಾತದಿಂದ ಭಕ್ತರು ಮೂಗು ಮುಚ್ಚಿಕೊಂಡು ದೇವರ ದರ್ಶನಕ್ಕೆ ತೆರಳುವಂತಾಗಿದೆ. ಇದು ದತ್ತನ ಸನ್ನಿಧಿಯಲ್ಲಿ ನೈರ್ಮಲ್ಯ ಸಮಸ್ಯೆ ಕಾಡುತ್ತಿದ್ದರೆ, ಭೀಮಾ, ಅಮರ್ಜಾ ಸಂಗಮದಲ್ಲಿ ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದ್ದಕ್ಕೆ ನದಿ ದಂಡೆ ಕಲುಷಿತಗೊಂಡು ನದಿಗೆ ಇಳಿಯದ ರೀತಿಯಲ್ಲಿ ಗಲೀಜಾಗುತ್ತಿದೆ. ಇವೆರಡರಿಂದಾಗಿ ಗಾಣಗಾಪೂರ ನಿವಾಸಿಗಳು ಹಾಗೂ ದತ್ತನ ಭಕ್ತರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದೆ.
.ರಾಜ್ಯದ ಬೇರೆ ಬೇರೆ ಮುಜರಾಯಿ ಇಲಾಖೆ ದೇವಸ್ಥಾನಗಳು ಸಾಕಷ್ಟು ಅಭಿವೃದ್ದಿ ಹೊಂದಿವೆ, ಆದರೆ ಗಾಣಗಾಪೂರ ಕ್ಷೇತ್ರ ಅನೇಕ ವರ್ಷಗಳಿಂದ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ನಾನಾ ರಾಜ್ಯಗಳ ಭಕ್ತರು ಇಲ್ಲಿಗೆ ಬಂದು ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿ ಹೋಗುವಂತಾಗಿದೆ. ಕೂಡಲೇ ಸಂಬಂಧ ಪಟ್ಟವರು ಗಾಣಗಾಪೂರ ಸಮಗ್ರ ಅಭಿವೃದ್ಧಿಗೆ ಮುಂದಾಗಲಿ.
- ಗಾಣಗಾಪೂರ ಗ್ರಾಮಸ್ಥರು-----
ಪಾರ್ಕಿಂಗ್ ಸಮಸ್ಯೆಯಿಂದ ಮುಖ್ಯ ರಸ್ತೆಗಳ ಮೇಲೆ ವಾಹನ ನಿಲುಗಡೆ ಮಾಡುವಂತಾಗಿದೆ. ಗಾಣಗಾಪೂರದಿಂದ 2ರಿಂದ 3 ಕಿ.ಮೀ ಮುಖ್ಯ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಿದ್ದರಿಂದ ದತ್ತನ ದರ್ಶನ ಪಡೆಯಲು ಅಡಚಣೆ ಉಂಟಾಯಿತು.- ವಾಹನ ಚಾಲಕರು
-------ಜನದಟ್ಟಣೆ ಮತ್ತು ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಈ ಬಾರಿ ಬಹಳ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಬಸ್ ನಿಲ್ದಾಣದ ತನಕ ಮಾತ್ರ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವಂತೆ ಮಾಡಿದ್ದರಿಂದ ಭಕ್ತರಿಗೆ ಸರಾಗವಾಗಿ ಬಂದು ದರ್ಶನ ಪಡೆಯುವಂತಾಗಿದೆ. ಮಳೆ ಬಂದು ಹೊಲ ಗದ್ದೆಗಳಲ್ಲಿ ಕೆಸರು ಆಗಿದ್ದರಿಂದಾಗಿ ಸ್ವಲ್ಪ ಮಟ್ಟಿನ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗುವಂತಾಯಿತು.
- ಶಿವಕಾಂತಮ್ಮ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ