ಶ್ರಾವಣ ಮಾಸ ಕಡೆ ಶನಿವಾರಕ್ಕೆ ಯಳಂದೂರಿನ ಬಿಳಿಗಿರಿ ರಂಗನಬೆಟ್ಟಕ್ಕೆ ಹರಿದು ಬಂದ ಭಕ್ತರು

| Published : Sep 01 2024, 01:48 AM IST

ಶ್ರಾವಣ ಮಾಸ ಕಡೆ ಶನಿವಾರಕ್ಕೆ ಯಳಂದೂರಿನ ಬಿಳಿಗಿರಿ ರಂಗನಬೆಟ್ಟಕ್ಕೆ ಹರಿದು ಬಂದ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸದ ಕಡೇ ಶನಿವಾರ ಯಳಂದೂರು ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಯಳಂದೂರು

ಶ್ರಾವಣ ಮಾಸದ ಕಡೇ ಶನಿವಾರ ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಕಡೇಯ ಶ್ರಾವಣ ಮಾಸದ ಶನಿವಾರ ಬೆಳಿಗ್ಗೆಯಿಂದಲೇ ಬಿಳಿಗಿರಿ ರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರಿಗೆ ವಿವಿಧ ಅಭಿಷೇಕಗಳನ್ನು ಮಾಡಿ, ತುಳಸಿ ಸೇರಿದಂತೆ ವಿವಿದ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ಬೆಳಿಗ್ಗೆಯಿಂದಲೇ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.ಇದರಿಂದ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು.

ಬೆಟ್ಟಕ್ಕೆ ಹೋಗಲು ಯಳಂದೂರು ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದ ದೇವಸ್ಥಾನ, ಕಮರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ದೇಗುಲದ ಸಮೀಪ ಇರುವ ಅನ್ನ ದಾಸೋಹದಲ್ಲಿ ಸಾವಿರಾರು ಭಕ್ತರಿಗೆ ಮಾಧ್ಯಾಹ್ನ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಯಿತು.ಭಕ್ತರಲ್ಲಿ ಮಹಿಳೆಯರೇ ಅಧಿಕ: ರಾಜ್ಯ ಸರ್ಕಾರವು ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಘೋಷಿಸಿರುವ ಕಾರಣ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಸೇರಿದಂತೆ ಇತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಪಟ್ಟಣದಿಂದ ಬಿಳಿಗಿರಿ ರಂಗನಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು. ಆದರೂ ಸಹ ಭಕ್ತರಿಂದ ಬಸ್‌ಗಳು ತುಂಬಿ ತುಳುಕುತ್ತಿದ್ದವು. ದೇವರ ದರ್ಶನ ಪಡೆದ ಭಕ್ತರು, ನಂತರ ಗರುಡೋತ್ಸವ ಸೇರಿದಂತೆ ಇತರೆ ಸೇವೆಗಳನ್ನು ಮಾಡಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ದಾಸಂದಿರು ಕಡ್ಲೆಪುರಿ, ಬೆಲ್ಲ, ಅಕ್ಕಿ, ಸೇರಿದಂತೆ ಇತರೆ ದವಸ ಧಾನ್ಯಗಳೊಂದಿಗೆ ದೇಗುಲದ ಸುತ್ತ ಬ್ಯಾಟೆಮನೆ ಸೇವೆಯಲ್ಲಿ ತೊಡಗಿದ್ದರು. ಶಾಸಕರಿಂದ ವಿಶೇಷ ಪೂಜೆ: ಕಡೇ ಶ್ರಾವಣ ಶನಿವಾರ ನಿಮಿತ್ತ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಬೆಂಬಲಿಗರು ಬೆಳಗಿನ ಜಾವದಲ್ಲಿ ತೆರಳಿ ದೇವರ ದರ್ಶನ ಪಡೆದುಕೊಂಡು ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಇತರೆ ಪೂಜಾ ಕಾರ್ಯಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಮುಖಂಡರಾದ ವೆಂಕಟೇಶ್, ಕೃಷ್ಣಪುರ ದೇವರಾಜು, ಕೇತಮ್ಮ , ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್. ಮೋಹನ್ ಕುಮಾರ್, ಸಿಬ್ಬಂದಿ ರಾಜು, ಶೇಷಾದ್ರಿ ಸೇರಿದಂತೆ ಇತರರು ಹಾಜರಿದ್ದರು.