ಸಾರಾಂಶ
- ಸ್ವರ್ಗದ ಬಾಗಿಲು ತೆರೆದಿರುವ ದಿನ ಎಂಬ ವಿಶೇಷ ನಂಬಿಕೆ । ತಿಮ್ಮಪ್ಪನ ದರ್ಶನ ಪಡೆದು ಪುನೀತರಾದ ಭಕ್ತಗಣ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವೈಕುಂಠ ಏಕಾದಶಿ ಅಂಗವಾಗಿ ನಗರ, ಜಿಲ್ಲಾದ್ಯಂತ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಶುಕ್ರವಾರ ನಸುಕಿನಿಂದಲೇ ಅಭಿಷೇಕ, ಅಲಂಕಾರ, ಪೂಜೆ, ಮಂಗಳಾರತಿ, ಮಹಾಮಂಗಳಾರತಿ ಕಾರ್ಯ ಶ್ರದ್ಧಾಭಕ್ತಿಯಿಂದ ನೆರವೇರಿದ್ದು, ಲಕ್ಷಾಂತರ ಭಕ್ತರು ಶ್ರೀ ಲಕ್ಷ್ಮೀ ನಾರಾಯಣ ದರ್ಶನ ಪಡೆದು ಪುನೀತರಾದರು.ನಗರದ ಎಂಸಿ ಕಾಲನಿ ಬಿ ಬ್ಲಾಕ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ದೇವಸ್ಥಾನ, ಲೋಕಿಕೆರೆ ರಸ್ತೆಯ ಯರವನಾಗತಿಹಳ್ಳಿ ಕ್ಯಾಂಪ್ ಕಲ್ಕೆರೆ ಕ್ಯಾಂಪ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನ, ಗೊಲ್ಲರಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನ, ಮಹಾರಾಜ ಪೇಟೆ ಶ್ರೀ ವಿಠ್ಠಲ ಮಂದಿರ, ದೊಡ್ಡಪೇಟೆ ಶ್ರೀ ಪಾಂಡುರಂಗ ದೇವಸ್ಥಾನ, ಭಗೀರಥ ವೃತ್ತ, ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ ಹೀಗೆ ನಾನಾ ಕಡೆ ನವಕೋಟಿ ನಾರಾಯಣನಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ವೈಕುಂಠ ಏಕಾದಶಿ ಎಂಬುದು ಸ್ವರ್ಗದ ಬಾಗಿಲು ತೆರೆದಿರುವ ದಿನವೆಂದು, ಈ ದಿನ ಶ್ರೀ ವೆಂಕಟೇಶ್ವರ ದರ್ಶನ ಪಡೆದಲ್ಲಿ ಸ್ವರ್ಗಕ್ಕೇ ಹೋದಂತೆ ಎಂಬ ನಂಬಿಕೆಗಳು ಹಿಂದುಗಳಲ್ಲಿ ಅನಾದಿಯಿಂದಲೂ ಇವೆ. ಅದರಂತೆ ವೈಕುಂಠ ಏಕಾದಶಿಯಂತೆ ಮಕ್ಕಳು, ಮಹಿಳೆಯರು, ಹಿರಿಯರು, ವಯೋವೃದ್ಧರಾದಿಯಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದರ್ಶನಕ್ಕಾಗಿ ನಸುಕಿನಿಂದಲೇ ಮನೆಯಲ್ಲಿ ಪೂಜೆ, ಪುನಸ್ಕಾರ ಮುಗಿಸಿಕೊಂಡು, ಸರದಿಯಲ್ಲಿ ದೇವಸ್ಥಾನಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ನಸುಕಿನಿಂದಲೇ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೇರಿದಂತೆ ವಿಷ್ಣುವಿನ ಅವತಾರದ ದೇವಸ್ಥಾನಗಳ ಮುಂದೆ ದೇವರ ದರ್ಶನಕ್ಕಾಗಿ ಜನರು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ನಿಂತಿದ್ದರು.ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ಅಖಂಡ ದರ್ಶನಕ್ಕಾಗಿ ಭಕ್ತರು ಶ್ರದ್ಧಾಭಕ್ತಿಯಿಂದ ಕಾಯುತ್ತಾ ನಿಂತಿದ್ದರು. ಎಲ್ಲ ದೇವಸ್ಥಾನಗಳಲ್ಲೂ ನಸುಕಿನಿಂದಲೇ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಶ್ರೀ ವೆಂಕಟೇಶ್ವರ, ಶ್ರೀ ಪಾಂಡುರಂಗ, ಶ್ರೀ ವಿಠ್ಠಲ, ಶ್ರೀ ಹರಿಹರೇಶ್ವರರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಕಾಕಡಾರತಿ, ಭಜನೆ ನಡೆಯಿತು.
ಸ್ವಾಮಿಯ ಸ್ಮರಣೆ, ದರ್ಶನದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಅಂತಹದ್ದರಲ್ಲಿ ಸ್ವರ್ಗದ ಬಾಗಿಲು ತೆರೆದಿರುವ ದಿನವಾದ ವೈಕುಂಠ ಏಕಾದಶಿಯಂದು ವೈಕುಂಠದೊಡೆಯ ಶ್ರೀ ಲಕ್ಷೀ ವೆಂಕಟೇಶ್ವರರ ದರ್ಶನದಂತೆ ಸರ್ವಾಂಲಕೃತ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಿದ ದಿನದಂದು ದರ್ಶನ ಮಾಡಿ, ಕಣ್ತುಂಬಿಕೊಂಡರೆ ಸ್ವರ್ಗವೇ ಸಿಕ್ಕಷ್ಟು ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಹಾಗಾಗಿ ಏಕಾದಶಿಯಂದು ಬಹುತೇಕ ಭಕ್ತರು ಉಪವಾಸ ಮಾಡಿ, ಸ್ವಾಮಿ ನಾಮಸ್ಮರಣೆಯಲ್ಲಿ ದಿನ ಕಳೆದರು.ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಇರುವ ಧನುರ್ಮಾಸ ಶುದ್ಧ ಏಕಾದಶಿಯನ್ನು ವೈಕುಂಠ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನಸ್ಸು ರಾಶಿಯಲ್ಲಿ ಪ್ರವೇಶಿಸಿದ ನಂತರ ಮಕರ ಸಂಕ್ರಮಣದವರೆಗಿನ ಅವಧಿಯಲ್ಲಿ ಮುಕ್ಕೋಟಿ ಏಕಾದಶಿ ಇರುತ್ತದೆ. ಬೆಳಗ್ಗೆಯಿಂದಲೇ ಉತ್ತರ (ವೈಕುಂಠ) ದ್ವಾರದ ಮುಖಾಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲಾದ್ಯಂತ ಲಕ್ಷಾಂತರ ಭಕ್ತರು ಸ್ವಾಮಿ ದರ್ಶನ ಪಡೆದು, ಪೂಜಿಸಿ, ಪುನೀತರಾದರು.
- - - -(ಫೋಟೋಗಳಿವೆ):