ಪ್ರತಿದಿನ ಬೆಳಗ್ಗೆ-ಸಂಜೆ ಒಟ್ಟಾಗಿ ಸೇರಿ ಆರತಿ, ಭಕ್ತಿಗೀತೆ ಹಾಗೂ ಪೂಜೆ ನೆರವೇರಿಸುತ್ತಿದ್ದ ಬಾಲಕರ ಭಕ್ತಿ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಣ್ಣಿಗೇರಿ: ಪುಟ್ಟ ಕೈಗಳಿಂದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಏಳು ದಿನಗಳ ಕಾಲ ಭಕ್ತಿಯಿಂದ ಪೂಜಿಸಿ, ಕೊನೆಗೆ ಸುಮಾರು 200 ಮಂದಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಅಣ್ಣಿಗೇರಿಯ ಬಾಲಕರ ತಂಡ ಗಮನ ಸೆಳೆಯಿತು.

ಪಟ್ಟಣದ ರೈಲ್ವೆ ನಿಲ್ದಾಣದ ಸಮೀಪದ ಸರ್ಕಾರಿ ಪಶುಸಂಗೋಪನಾ ಇಲಾಖೆಯ ನೂತನ ಕಟ್ಟಡದ ಮೇಲೆ 9-10 ವರ್ಷದ ಬಾಲಕರ ತಂಡ ಗಣೇಶೋತ್ಸವ ಆಯೋಜಿಸಿತ್ತು. ಆರಂಭದಲ್ಲಿ ಐದು ದಿನಗಳ ಕಾಲ ಉತ್ಸವ ಆಚರಿಸಲು ನಿರ್ಧರಿಸಿದ್ದ ಬಾಲಕರು, ತಮ್ಮ ಪರಿಸರ ಸ್ನೇಹಿ ಗಣೇಶನ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಯಿಂದ ಸಾರ್ವಜನಿಕರಿಂದ ದೊರೆತ ಪ್ರೋತ್ಸಾಹದಿಂದ ಉತ್ಸವವನ್ನು ಏಳು ದಿನಗಳಿಗೆ ವಿಸ್ತರಿಸಿದರು.

ಪ್ರತಿದಿನ ಬೆಳಗ್ಗೆ-ಸಂಜೆ ಒಟ್ಟಾಗಿ ಸೇರಿ ಆರತಿ, ಭಕ್ತಿಗೀತೆ ಹಾಗೂ ಪೂಜೆ ನೆರವೇರಿಸುತ್ತಿದ್ದ ಬಾಲಕರ ಭಕ್ತಿ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಹಲವರು ಮಕ್ಕಳ ಪರಿಶ್ರಮವನ್ನು ಶ್ಲಾಘಿಸಿ ಗಣೇಶನ ಹುಂಡಿಗೆ ಕಾಣಿಕೆ ಹಾಕಿ ಪ್ರೋತ್ಸಾಹಿಸಿದರು.

ಭಾವಪೂರ್ಣ ಬೀಳ್ಕೊಡುಗೆ: ಏಳನೇ ದಿನವಾದ ಭಾನುವಾರ ಬೆಳಗ್ಗಿನಿಂದಲೇ ವಿಸರ್ಜನೆಗೆ ಸಿದ್ಧತೆ ಆರಂಭವಾಗಿತ್ತು. ಕಳೆದ ಆರು ದಿನಗಳ ಸಂಭ್ರಮದ ಬಳಿಕ ಗಜಮುಖನಿಗೆ ಬೀಳ್ಕೊಡುವ ಸಂದರ್ಭ ಬಾಲಕರಲ್ಲಿ ಬೇಸರವೂ ಕಾಣಿಸಿತು. ಭಕ್ತಿಗೀತೆ, ಚಪ್ಪಾಳೆ ಹಾಗೂ ‘ಗಣಪತಿ ಬಪ್ಪಾ, ಮುಂದಿನ ವರ್ಷ ಬೇಗ ಬಾ’ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ವಿಸರ್ಜನೆಯ ಬಳಿಕ ಬಾಲಕರು ಸುಮಾರು 200 ಮಂದಿಗೆ ಶಿರಾ, ಫಲಾವ್‌ ಸೇರಿದಂತೆ ಅನ್ನಸಂತರ್ಪಣೆ ಏರ್ಪಡಿಸಿದರು. ಅಡುಗೆ ಸಿದ್ಧತೆಯಿಂದ ಹಿಡಿದು ತಟ್ಟೆ ಜೋಡಿಸುವುದು ಹಾಗೂ ಊಟ ಬಡಿಸುವ ವರೆಗೂ ಹಿರಿಯರೊಂದಿಗೆ ಮಕ್ಕಳು ಕೈಜೋಡಿಸಿದರು. ನಗುಮುಖದಿಂದ ಊಟ ಬಡಿಸಿದ ಪುಟಾಣಿಗಳ ಸೇವಾಭಾವನೆ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.

ಬಡಾವಣೆ ನಿವಾಸಿಗಳಾದ ಸತೀಶ್ ಕಡೇಮನಿ, ಸುರೇಶ ಚಾವಡಿ ಹಾಗೂ ಬಸವೇನ್ನಪ್ಪ ಕಪ್ಪತ್ತನವರ ಅವರು ಮಕ್ಕಳ ಶ್ರಮ, ಒಗ್ಗಟ್ಟು ಹಾಗೂ ಭಕ್ತಿಯನ್ನು ಶ್ಲಾಘಿಸಿದರು.

ಮಿಹಿರ್ ಹೂಗಾರ್, ವಿಕಾಸ ಕಡೇಮನಿ, ಮಾನ್ವಿತಾ ಕಪ್ಪತ್ತನವರ, ವಿಶ್ವ ಹಳ್ಳಿ, ವಿನಾಯಕ ಗುಡಿಸಲಮನಿ, ಶ್ರೀನಿಧಿ ಭೋವಿ ಹಾಗೂ ಸಮರ್ಥ ಚವಡಿ ಉತ್ಸವದ ಯಶಸ್ಸಿಗೆ ಶ್ರಮಿಸಿದರು.

ಪುಟ್ಟ ವಯಸ್ಸಿನಲ್ಲಿಯೇ ಮಕ್ಕಳಿಗೆ ಧಾರ್ಮಿಕ ಪರಂಪರೆ ಬಗ್ಗೆ ನಂಬಿಕೆ ಮೂಡಿರುವುದು ಶ್ಲಾಘನೀಯ. ಮುಂದಿನ ವರ್ಷವೂ ಅಗತ್ಯ ಸಹಕಾರ ನೀಡಿ ಮತ್ತಷ್ಟು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಪ್ರೋತ್ಸಾಹಿಸಲಾಗುವುದು ಎಂದು ಸ್ಥಳೀಯ ನಿವಾಸಿ ಕುಮಾರ ಹೂಗಾರ ತಿಳಿಸಿದ್ದಾರೆ.